ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿದ್ದ ‘ಚಲೋ ಸಂಸತ್’ ಪ್ರತಿಭಟನೆ ಸೋಮವಾರ ಹಿಂಸಾತ್ಮಕ ತಿರುವು ಪಡೆದಿದ್ದು, ಪ್ರತಿಭಟನಾಕಾರರು ಸಂಸತ್ ಕಡೆಗೆ ಸಾಗಲು ಭದ್ರತಾ ಬ್ಯಾರಿಕೇಡ್ಗಳನ್ನು ದಾಟಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿ, ಟಿಯರ್ ಗ್ಯಾಸ್ ಶೆಲ್ಗಳನ್ನು ಪ್ರಯೋಗಿಸಿದರು.
ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿ ಸಂಸತ್ ಭವನದತ್ತ ಮೆರವಣಿಗೆ ನಡೆಸಿದ ಕಾಕ್ರೋಚ್ ಜನತಾ ಪಾರ್ಟಿ (CJP) ಕಾರ್ಯಕರ್ತರ ಪ್ರತಿಭಟನೆ ಸೋಮವಾರ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ, ತಳ್ಳಾಟ-ನೂಕಾಟ, ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಿಸಿದರು. ಈ ವೇಳೆ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿದ್ದು, ಹಲವು ಪೊಲೀಸರಿಗೆ ಗಾಯಗಳಾಗಿದೆ ಎಂದು ಹೇಳಲಾಗಿದೆ. ಈ ನಡುವೆ, CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ಜಂತರ್ ಮಂತರ್ನಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಸತ್ತಿನ ಮಳೆಗಾಲ ಅಧಿವೇಶನದ ಮೊದಲ ದಿನವೇ ನಡೆದ ಈ ಪ್ರತಿಭಟನೆ ವೇಳೆ ಕೇಂದ್ರ ದೆಹಲಿಯ ಹಲವು ಭಾಗಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಯಿತು.ಮೊದಲ ಘರ್ಷಣೆ ಜಂತರ್ ಮಂತರ್ ಬಳಿ ಸಂಭವಿಸಿತು. ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಿ ಸಂಸತ್ ಕಡೆಗೆ ಸಾಗಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಬಳಿಕ ಸಂಸತ್ ಸಮೀಪದ ಭದ್ರತಾ ವಲಯದಲ್ಲೂ ಹಲವು ಬ್ಯಾರಿಕೇಡ್ಗಳನ್ನು ಒಡೆಯಲು ಯತ್ನಿಸಿದ ವೇಳೆ ಮತ್ತೊಮ್ಮೆ ಘರ್ಷಣೆ ನಡೆಯಿತು. ಈ ವೇಳೆ ಕೆಲವು ಪ್ರತಿಭಟನಾಕಾರರು ಹಾಗೂ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಜಂತರ್ ಮಂತರ್, ಕಾನ್ಸ್ಟಿಟ್ಯೂಷನ್ ಕ್ಲಬ್, ರೈಲ್ ಭವನ, ಶಾಸ್ತ್ರಿ ಭವನ, ಜನಪಥ್, ಕಾನಾಟ್ ಪ್ಲೇಸ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಮೀಪ ಸೇರಿದಂತೆ ಕೇಂದ್ರ ದೆಹಲಿಯ ಹಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಬಿಗಿ ಭದ್ರತೆಯ ನಡುವೆಯೂ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಶೇಷವಾಗಿ ಶಾಸ್ತ್ರಿ ಭವನ ಸಮೀಪ ಬ್ಯಾರಿಕೇಡ್ಗಳನ್ನು ದಾಟಿ ಜಂತರ್ ಮಂತರ್ ಹಾಗೂ ಸಂಸತ್ ಮೆರವಣಿಗೆಯಲ್ಲಿ ಸೇರಲು ಕೆಲವರು ಯತ್ನಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಣ್ಣೀರಿನ ಅನಿಲ ಶೆಲ್ಗಳನ್ನು ಪ್ರಯೋಗಿಸಿ ಗುಂಪನ್ನು ಚದುರಿಸಿದವು.ಸಂಸತ್ತಿನ ಮಳೆಗಾಲ ಅಧಿವೇಶನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸಂಸತ್ ಭವನದ ಸುತ್ತಮುತ್ತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿತ್ತು. ಸಂಸತ್ಗೆ ಹೊಂದಿಕೊಂಡಿರುವ ರೈಲ್ ಭವನ ಪ್ರದೇಶದಲ್ಲಿ ದೆಹಲಿ ಪೊಲೀಸ್ ಹಾಗೂ ಅರೆಸೈನಿಕ ಪಡೆಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರು ಸಂಸತ್ ಕಡೆಗೆ ಸಾಗದಂತೆ ತಡೆಯಲು ಹಲವು ಹಂತಗಳಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಿ, ಅಗತ್ಯವಿದ್ದಲ್ಲಿ ಅಶ್ರುವಾಯು ಪ್ರಯೋಗ ಮಾಡಲಾಯಿತು.

