ಅನಂತಪುರ: ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಒಂದೂವರೆ ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ದಾರುಣ ಘತನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರಂ ಗ್ರಾಮದ ಶಾಲೆಯಲ್ಲಿ ನಡೆದಿದೆ.
ಗ್ರಾಮದ ಅಂಬೇಡ್ಕರ್ ಗುರುಕುಲ ಶಾಲೆಯ ಅಡುಗೆ ಮನೆಯಲ್ಲಿ ಇಟ್ಟಿದ್ದ ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಮಗು ಬಿದ್ದಿದೆ. ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಗುವನ್ನು ಅನಂತಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.
ಒಂದೂವರೆ ವರ್ಷದ ಅಕ್ಷಿತಾ ಮೃತ ಕಂದಮ್ಮ. ಮಗು ಅಕ್ಷಿತಾಳ ತಾಯಿ ಕೃಷ್ಣವೇಣಿ ಶಾಲೆಯಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಕ್ಕಳಿಗೆ ವಿತರಿಸಲೆಂದು ಶಾಲೆಯ ಅಡುಗೆ ಮನೆಯಲ್ಲಿ ಹಾಲು ಕಾಯಿಸಿ ಇಡಲಾಗಿತ್ತು. ಅಡುಗೆ ಮನೆಯಲ್ಲಿ ಯಾರೂ ಇರಲಿಲ್ಲ. ಈ ವೇಳೆ ಆಟವಾಡುತ್ತಾ ಅಡುಗೆ ಮನೆಗೆ ಬಂದ ಮಗು ಆಕಸ್ಮಿಕವಾಗಿ ಹಾಲಿನ ಪಾತ್ರೆಗೆ ಬಿದ್ದಿದ್ದಾಳೆ. ಮಗುವಿನ ಚೀರಾಟ ಕೇಳಿ ಬಂದು ನೋಡುವಷ್ಟರಲ್ಲಿ ಮಗು ಪಾತ್ರೆಯಲ್ಲಿ ಬಿದ್ದಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾಗಿ ಸುಟ್ಟುಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ.