ಕೃತಕ ಬುದ್ಧಿಮತ್ತೆ (ಎಐ) ಕುರಿತು ಎಲ್ಲಾ ಕಡೆ ಮಾತುಗಳು. ಈಗ ಪೊಲೀಸರು ಎಐ ಬಳಕೆ ಮಾಡಲು ಆರಂಭಿಸಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಚಿಕ್ಕಮಗಳೂರು ಪೊಲೀಸರು ಎಐ ಬಳಕೆ ಮಾಡುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಘಟಕವು AI-ಚಾಲಿತ ಕಮಾಂಡ್ ಕಂಟ್ರೋಲ್ ರೂಂ (ITMS) ಮೂಲಕ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಿದೆ. ಈ ಕಂಟ್ರೋಲ್ ರೂಂ ಹೇಗೆ ಕಾರ್ಯ ನಿರ್ವಹಣೆ ಮಾಡಲಿದೆ? ಎಂದು ಸಹ ವಿವರಣೆ ನೀಡಲಾಗಿದೆ.
ಚಿಕ್ಕಮಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವ್ಯವಸ್ಥೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿ AI ಕಮಾಂಡ್ ಕಂಟ್ರೋಲ್ ರೂಂ ಅನ್ನು ಸ್ಥಾಪನೆ ಮಾಡಲಾಗಿದೆ.
ಇಂಧನ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸೋಮವಾರ ಈ ಕಂಟ್ರೋಲ್ ರೂಂ ಉದ್ಘಾಟಿಸಿದ್ದಾರೆ. ಬಳಿಕ ಅಧಿಕಾರಿಗಳ ಜೊತೆ ಅವರು ಕಂಟ್ರೋಲ್ ರೂಂ ಕುರಿತು ಮಾಹಿತಿ ಪಡೆದರು.
ಚಿಕ್ಕಮಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಮತ್ತು ಅಪರಾಧ ಪ್ರಕರಣಗಳಿಗೆ ತಡೆ ಹಾಕಲು ಈ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲಾಗಿದೆ.
ಕೆ.ಪಿ.ಟಿ.ಸಿ.ಎಲ್ ಸಹಯೋಗದೊಂದಿಗೆ ಸಿಎಸ್‌ಆರ್ ಅನುದಾನದಡಿ ಅಂದಾಜು 1.75 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. ಸೋಮವಾರ ಈ ವ್ಯವಸ್ಥೆ ಕಾರ್ಯಾರಂಭ ಮಾಡಿದೆ.
ವಿಶೇಷತೆಗಳು
• ಎಐ ಕಣ್ಗಾವಲು: ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಒಟ್ಟು 41 ಸೋಲಾರ್ ಪವರ್ ಎಐ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
• ಸ್ವಯಂಚಾಲಿತ ದಂಡ: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಈ ವ್ಯವಸ್ಥೆಯ ಮೂಲಕ ಸ್ವಯಂಚಾಲಿತವಾಗಿ ದಂಡ ವಿಧಿಸಲಾಗುತ್ತದೆ.
• ಸಾರ್ವಜನಿಕ ಸುರಕ್ಷತೆ: ಅಪರಾಧಗಳ ಪತ್ತೆ ಹಚ್ಚುವಿಕೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಐಸಿಸಿಸಿ ಕೇಂದ್ರವು 24 ಗಂಟೆಯೂ ಕಾರ್ಯನಿರ್ವಹಿಸಲಿದೆ.
ತಂತ್ರಜ್ಞಾನದ ನೆರವಿನಿಂದ ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪೊಲೀಸರೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.

