ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ 24 ಎಕರೆ ಸರ್ಕಾರಿ ಕೆರೆ ಜಮೀನುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಇ-ಖಾತೆ ಮಾಡಿಸಿಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ನಗರಸಭೆ ಅಧಿಕಾರಿಗಳೇ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲೆಯ ಅಣಕನೂರು ಗ್ರಾಮದ 100 ಕೋಟಿ ರೂ. ಮೌಲ್ಯದ 24 ಎಕರೆ ಸರ್ಕಾರಿ ಕೆರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಇ-ಖಾತೆ ಮಾಡಿಕೊಟ್ಟಿದ್ದ ನಗರಸಭೆ ಅಧಿಕಾರಿಗಳ ಅಕ್ರಮ ತನಿಖೆಯಲ್ಲಿ ಸಾಬೀತಾಗಿದ್ದು, ಹಗರಣದಲ್ಲಿ ಭಾಗಿಯಾದ ಪೌರಾಯುಕ್ತ ಮನ್ಸೂರ್ ಅಲಿ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಭು ಜಿ. ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ನಗರಸಭೆ ವ್ಯಾಪ್ತಿಗೆ ಬಾರದಿದ್ದರೂ ಕಂದಾಯ ಇಲಾಖೆಯ ಅಧೀನದಲ್ಲಿರುವ 24 ಎಕರೆ ಸರ್ಕಾರಿ ಕೆರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಇ-ಖಾತೆ ಮಾಡಿಕೊಡಲಾಗಿದೆ. ಇದು ತನಿಖೆಯಲ್ಲಿ ಬಯಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಕಸಬಾ ಹೋಬಳಿ, ಅಣಕನೂರು ಗ್ರಾಮದ ಸರ್ವೇ ಸಂಖ್ಯೆ 109ರಲ್ಲಿರುವ ‘ಅಮಾಣಿಗೋಪಾಲಕೃಷ್ಣ ಕೆರೆ’ (ಸರ್ಕಾರಿ ‘ಬಿ’ ಖರಾಬು ಜಮೀನು) ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ್ದಾಗಿದೆ. ಈ ಜಮೀನಿಗೆ ಸಂಬಂಧಿಸಿದಂತೆ ನಗರಸಭೆಯ ಪೌರಾಯುಕ್ತ ಮನ್ಸೂರ್ ಅಲಿ, ಕರವಸೂಲಿಗಾರ ವೆಂಕಟೇಶ್, ಕಂದಾಯ ನಿರೀಕ್ಷಕ ವಿ.ಆರ್. ವೆಂಕಟೇಶ್ ಹಾಗೂ ನಿವೃತ್ತ ಕಂದಾಯಾಧಿಕಾರಿ ನಟರಾಜ್ ಅವರನ್ನೊಳಗೊಂಡ ತಂಡವು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಅಕ್ರಮವಾಗಿ ಇ-ಖಾತೆ ವಿತರಿಸಿ ಕರ್ತವ್ಯಲೋಪ ಎಸಗಿದ್ದಾರೆ.
ಹಗರಣದ ತನಿಖೆಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು ಜಿ. ಅವರು ತನಿಖಾ ತಂಡವನ್ನು ರಚಿಸಿದ್ದರು. ತನಿಖಾ ವರದಿ ಕೈಸೇರಿದ ನಂತರ, ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವರದಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗಳ ಈ ಕ್ರಮಕ್ಕೆ ದೂರುದಾರ ಹಾಗೂ ಸಾಮಾಜಿಕ ಹೋರಾಟಗಾರ ಅಮೀರ್ ಮಹಮದ್ ಸಾಧಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೌರಾಯುಕ್ತರನ್ನು ಹೊರತುಪಡಿಸಿ ಉಳಿ ದ ತಪ್ಪಿತಸ್ಥ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳೇ ನೇರವಾಗಿ ಅಮಾನತುಗೊಳಿಸಬಹುದಿತ್ತು ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಿತ್ತು ಎಂದು ಅವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ರಾಜ್ಯ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಸರ್ಕಾರಿ ಕೆರೆ ಜಮೀನನ್ನು ಲೂಟಿ ಮಾಡಲು ಅಧಿಕಾರಿಗಳೇ ಯತ್ನಿಸಿರುವ ಘಟನೆ ಇದಾಗಿದ್ದು, ಸರ್ಕಾರ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಕಾದುನೋಡಬೇಕಿದೆ.

