ವರನಟ ಡಾ. ರಾಜ್‌ಕುಮಾರ್ ಸಮಾಧಿಗೆ ಎರಡೂವರೆ ಎಕರೆ ಜಾಗ ಕೊಟ್ಟಿದ್ದು ಎಷ್ಟು ಸರಿ, ಅವರಿಗೆ ಜಾಗ ಕೊಟ್ಟ ಮೇಲೆ ಎಲ್ಲ ಮೇರುನಟರಿಗೂ ಸರಿ ಸಮಾನದ ಗೌರವ ಕೊಡಬೇಕಿತ್ತು ಎಂದು ಹೇಳಿಕೆ ನೀಡುವ ಮೂಲಕ ವಿವಾದ ಎಬ್ಬಿಸಿದ್ದ ಚೇತನ್ ಅಹಿಂಸಾ ವಿರುದ್ಧ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ಕಲಾವಿದರು ಕಿಡಿಕಾರಿದ್ದರು.
ಇದರ ಬೆನ್ನಲ್ಲೇ ರಾಜ್‌ಕುಮಾರ್ ನಿಧನ ಹೊಂದಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸಹ ಮಾಧ್ಯಮದವರ ಜತೆ ಮಾತನಾಡುತ್ತಾ ಅವರೆಲ್ಲ ಪ್ರಚಾರ ಪ್ರಿಯರು ಅವರಿಗೆ ರಾಜ್‌ಕುಮಾರ್ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ್ದರು. ಅಲ್ಲದೇ ಯೋಗ್ಯರಿದ್ದರೆ ಏನಾದರೂ ಉತ್ತರ ಕೊಡಬಹುದಿತ್ತು ಎಂದು ಚೇತನ್‌ಗೆ ಕೌಂಟರ್ ಕೊಟ್ಟಿದ್ದರು.
ನಿಖಿಲ್ ಕುಮಾರಸ್ವಾಮಿಯ ಈ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚೇತನ್ ಅಹಿಂಸಾ ‘ಪ್ರಜಾಪ್ರಭುತ್ವದಲ್ಲಿ ಯಾರು ಮಾತನಾಡಲು ಯೋಗ್ಯ? ಮಾಜಿ ಪ್ರಧಾನಿಯ ಮಗ 2006ರಲ್ಲಿ ಅವಕಾಶವಾದಿ ಸ್ಮಾರಕ ಪಾಲಿಟಿಕ್ಸ್ ಶುರು ಮಾಡಿ ಕನ್ನಡ ಚಲನಚಿತ್ರರಂಗದ ಅಭಿಮಾನಿಗಳ ನಡುವೆ ಅದಕ್ಕೆ ಸಂಬಂಧಪಟ್ಟ ಫ್ಯಾನ್ ವಾರ್ಸ್ ಪ್ರೇರೇಪಿಸಿದವರಾ? ಅಥವಾ ಅವರ ಮಗ, ಮೂರು ಬಾರಿ ಸೋತವರು, ಸ್ವಜನಪಕ್ಷಪಾತ ಹೊರತುಪಡಿಸಿ ಇನ್ನೇನೂ ಸಾಧನೆ ಇಲ್ಲದವರಾ? ಪ್ರಜಾಪ್ರಭುತ್ವದಲ್ಲಿ ನಾವೆಲ್ಲರೂ ಮಾತನಾಡಲು ಯೋಗ್ಯರೇ. ಆದರೆ ಯಾರ ಮಾತಿಗೆ ನಿಜವಾದ ತೂಕ ಇದೆ ಎನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ’ ಎಂದು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ.

