ಚಿತ್ರದುರ್ಗ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಹೆಚ್ಚಳವಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ಮತ್ತು ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಪೊಲೀಸ್, ಅಬಕಾರಿ, ಅರಣ್ಯ, ಕೃಷಿ, ತೋಟಗಾರಿಕೆ ಸೇರಿದಂತೆ ಶಾಲಾ ಕಾಲೇಜುಗಳ ಮುಖ್ಯಸ್ಥರು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ನ್ಯಾಷಿನಲ್ ನಾರ್ಕೊಟಿಕ್ಸ್ ಕೋ-ಆರ್ಡಿನೇಷನ್ ಪೋರ್ಟಲ್ (NCORD)ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಾಂಜಾ ಮಾರಾಟದ ಪ್ರಕರಣಗಳು ಕಡಿಮೆ ಇವೆ. ಆದರೆ, ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ. ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗದಂತೆ ತಡೆಯಲು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಲಾ-ಕಾಲೇಜುಗಳಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಬಕಾರಿ ಇಲಾಖೆ ವತಿಯಿಂದ ಮದ್ಯದ ಅಂಗಡಿಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡದಂತೆ ಎಚ್ಚರಿಕೆ ಫಲಕಗಳನ್ನು ಹಾಕಿಸುವುದರ ಜೊತೆಗೆ ನಿರಂತರವಾಗಿ ತಪಾಸಣೆ ನಡೆಸಬೇಕು. ಜಿಲ್ಲೆಯು ಆಂಧ್ರಪ್ರದೇಶದೊAದಿಗೆ ಸುಮಾರು 150 ಕಿ.ಮೀ ಗಡಿಯನ್ನು ಹಂಚಿಕೊAಡಿದೆ. ಈ ಭಾಗದ ಸಣ್ಣಪುಟ್ಟ ಕಾಲುದಾರಿಗಳ ಮೂಲಕ ಅಕ್ರಮವಾಗಿ ಸೇಂದಿ ಮತ್ತು ಮಾದಕ ವಸ್ತುಗಳು ಸಾಗಣೆಯಾಗುವ ಸಾಧ್ಯತೆ ಇದೆ. ಇದನ್ನು ತಡೆಗಟ್ಟಲು ಅಬಕಾರಿ ಮತ್ತು ಪೊಲೀಸ್ ಇಲಾಖೆಗಳು ಒಗ್ಗೂಡಿ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಿ ಕಾರ್ಯಾಚರಣೆ ನಡೆಸಬೇಕು. ವೈದ್ಯಕೀಯ ಉದ್ದೇಶಕ್ಕೆ ಬಳಸುವ ಔಷಧಗಳು ದುರುಪಯೋಗವಾಗದಂತೆ ನೋಡಿಕೊಳ್ಳಲು ಮೆಡಿಕಲ್ ಕಾಲೇಜುಗಳು ಮತ್ತು ಔಷಧ ಮಳಿಗೆಗಳ ಮೇಲೆ ನಿಗಾ ಇಡಬೇಕು. ಅವಧಿ ಮುಗಿದ ಔಷಧಗಳ ವಿಲೇವಾರಿ ಬಗ್ಗೆಯೂ ಸರಿಯಾದ ಕ್ರಮ ವಹಿಸುವಂತೆ ಜಿಲ್ಲಾ ಔಷಧ ನಿಯಂತ್ರಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಡ್ರಗ್ ಸೇವೆನೆ ಪತ್ತೆ ಕಿಟ್ ಸರಬರಾಜು:
ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಸಮುದಾಯ ಹಂತದ ಆಸ್ಪತ್ರೆಗಳಿಗೆ ಡ್ರಗ್ ಟೆಸ್ಟಿಂಗ್ ಕಿಟ್‌ಗಳನ್ನು ಸರಬರಾಜು ಮಾಡಬೇಕು. ಇದರ ವೆಚ್ಚನ್ನು ಜಿಲ್ಲಾಡಳಿತದಿಂದ ಭರಿಸಲಾಗುವುದು. ಪೊಲೀಸ್ ಇಲಾಖೆಯ ವತಿಯಿಂದಲೇ ಸ್ವಂತ ಖರ್ಚಿನಲ್ಲಿ ಡ್ರಗ್ ಟೆಸ್ಟಿಂಗ್ ಕಿಟ್‌ಗಳನ್ನು ಖರೀದಿಸಿ ಎಲ್ಲಾ ಪೊಲೀಸ್ ಠಾಣೆಗಳಿಗೆ ವಿತರಿಸಿದ್ದಾರೆ. ಇದರಿಂದ ಶಂಕಿತರನ್ನು ತಕ್ಷಣವೇ ಪರೀಕ್ಷೆಗೆ ಒಳಪಡಿಸಲು ಸಾಧ್ಯವಾಗಲಿದೆ. ಶಂಕಿತರನ್ನು ಪೊಲೀಸರು ಡ್ರಗ್ ಕಿಟ್ ಪರೀಕ್ಷೆ ಕರೆ ತಂದಾಗ ಯಾವುದೇ ವೈದ್ಯರು ಅಸಹಕಾರ ನೀಡಬಾರದು. ಹೊಳಲ್ಕೆರೆಯ ಸರ್ಕಾರಿ ವೈದ್ಯರೊಬ್ಬರು ಡ್ರಗ್ ಟೆಸ್ಟಿಂಗ್ ವರದಿ ನೀಡಲು ಅಸಹಕಾರ ತೋರುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ವರದಿ ನೀಡಲು ವಿಳಂಬ ಮಾಡುತ್ತಿರುವ ಅಥವಾ ತಪಾಸಣಗೆ ನಿರಾಕರಿಸುತ್ತಿರುವ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.
ಯುವ ಪೀಳಿಗೆಗೆ ಮಾರಕವಾಗುತ್ತಿರುವ ಮಾದಕ ವಸ್ತು:
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಸಭೆಯಲ್ಲಿ ಕಳಕಳಿ ವ್ಯಕ್ತಪಡಿಸಿದರು.
ಜಿಲ್ಲೆಗೆ ನೆರೆ ರಾಜ್ಯಗಳಾದ ಒಡಿಶಾ ಮತ್ತು ಆಂಧ್ರಪ್ರದೇಶದ ಮೂಲಕ ವಿವಿಧ ಮಾರ್ಗಗಳಿಂದ ಮಾದಕ ವಸ್ತುಗಳು ಸರಬರಾಜಾಗುತ್ತಿವೆ. ಒಡಿಶಾ – ವಿಶಾಖಪಟ್ಟಣಂ – ಬೆಂಗಳೂರು ಮಾರ್ಗವಾಗಿ ಚಲಿಸುವ ರೈಲುಗಳಲ್ಲಿ ಹೆಚ್ಚಿನ ಗಾಂಜ ರಾಜ್ಯಕ್ಕೆ ಸರಬರಾಜು ಆಗುತ್ತಿದೆ. ದಾವಣಗೆರೆ, ಚಳ್ಳಕೆರೆ, ಬಳ್ಳಾರಿ, ಹೊಸಪೇಟೆ ಮತ್ತು ಅನಂತಪುರದಿಂದ ಜಿಲ್ಲೆಯಿಂದಲೂ ಡ್ರಗ್ ಪೆಡ್ಲರ್ಸ್ ಗಾಂಜಾ ಸರಬರಾಜು ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳ ಹೊಲಗಳಲ್ಲಿ ಗಾಂಜಾ ಬೆಳೆಯುತ್ತಿರುವ ಪ್ರಕರಣಗಳೂ ಸಹ ಪತ್ತೆಯಾಗುತ್ತಿವೆ. ರೈಲ್ವೆ ನಿಲ್ದಾಣಗಳು ಮತ್ತು ಬಸ್‌ಗಳ ಮೂಲಕ ಸಾಗಣೆಯಾಗುವ ಮಾದಕ ವಸ್ತುಗಳನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದೆ. ಒಟ್ಟಾರೆಯಾಗಿ ಜಿಲ್ಲೆಯನ್ನು ಮಾದಕ ಮುಕ್ತಗೊಳಿಸಲು ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಅಂತರರಾಜ್ಯ ಮದ್ಯ ಮತ್ತು ಸ್ಪಿರಿಟ್ ಸಾಗಣೆ ತಡೆಗೆ ಬಿಗಿ ಕ್ರಮ:
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮಾದಕ ವಸ್ತುಗಳ ಸಾಗಣೆಯನ್ನು ತಡೆಗಟ್ಟಲು ಅಬಕಾರಿ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರಮುಖ ಗಡಿ ಭಾಗಗಳಾದ ಮೊಣಕಾಲ್ಮೂರು, ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕು ಗಡಿ ಭಾಗದಲ್ಲಿ ಶಾಶ್ವತ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಮೊಣಕಾಲ್ಮೂರು ಚೆಕ್‌ಪೋಸ್ಟ್ನಲ್ಲಿ ಇತ್ತೀಚೆಗೆ 48 ಲೀಟರ್ ಮದ್ಯವನ್ನು ಹೊತ್ತೊಯ್ಯುತ್ತಿದ್ದ ನಾಲ್ಕು ಚಕ್ರದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದಂತೆ ಗ್ರಾಮೀಣ ರಸ್ತೆಗಳ ಮೂಲಕ ಸಣ್ಣ ಪ್ರಮಾಣದಲ್ಲಿ ಸಾಗಿಸುತ್ತಿದ್ದ ಪ್ರಕರಣಗಳನ್ನು ಸಹ ಪತ್ತೆಹಚ್ಚಲಾಗಿದೆ ಎಂದು ಅಬಕಾರಿ ಉಪ ಆಯುಕ್ತೆ ಡಾ.ಆಶಾಲತಾ ಸಭೆಯಲ್ಲಿ ತಿಳಿಸಿದರು.
ಅಕ್ರಮ ನೀರಾ ಮಾರಾಟದ ವಿರುದ್ಧ ಕಾನೂನು ಕ್ರಮ:
ತೋಟಗಾರಿಕಾ ಇಲಾಖೆಯ ಸಮನ್ವಯದೊಂದಿಗೆ ಅಧಿಕೃತ ಪರವಾನಗಿ ಪಡೆದು ನೀರಾ ಮಾರಾಟ ಮಾಡಲು ಅವಕಾಶವಿದೆ. ಆದರೆ ಕಾನೂನು ಉಲ್ಲಂಘಿಸಿ ಜಿಲ್ಲೆಯ ಕೆಲ ರೈತ ಸಂಘಗಳ ಪರವಾನಗಿ ಪಡೆಯದೆ ನೀರಾ ಮಾರಾಟ ಮಾಡುತ್ತಿವೆ. ಈ ಹಿಂದೆ ಎಚ್ಚರಿಕೆ ನೀಡಿದ್ದರೂ ಪರವಾನಗಿ ಪಡೆಯದ ಹಿನ್ನೆಲೆಯಲ್ಲಿ ಅಂತಹ ಸಂಘಗಳ ವಿರುದ್ಧ ಪೊಲೀಸರಿಗೆ ಎಫ್‌ಐಆರ್ ದಾಖಲಿಸಲು ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಇದೇ ವೇಳೆ ಗಾಂಜಾ ಬೆಳೆಯುವುದರಿಂದ ಎದುರಿಸಬೇಕಾದ ಕಾನೂನು ಸಂಘರ್ಷದ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು. ಬೆಳೆ ಸಮೀಕ್ಷೆ ಹಂತದಲ್ಲಿ ಸಮೀಕ್ಷಾಕಾರರಿಗೆ ಗಾಂಜಾ ಬೆಳೆಯ ಮಾಹಿತಿ ನೀಡಲು ತರಬೆತಿ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶಾಲಾ ಕಾಲೇಜುಗಳ ಸುತ್ತಮುತ್ತಲಿನ ಗೂಡು ಅಂಗಡಿಗಳನ್ನು ತೆರವು ಮಾಡುವಂತೆ ನಗರ ಸಭೆ ಅಧಿಕಾರಿಗಳಿಗೆ ಆದೇಶಿಸಿದರು.
ಸಭೆಯಲ್ಲಿ ಉಪವಿಭಾಗಧಿಕಾರಿ ಡಾ.ಕೆ.ಜೆ.ಕಾಂತರಾಜು, ಪೊಲೀಸ್ ಉಪಾಧೀಕ್ಷಕರುಗಳಾದ ಅರುಣ್ ನಾಗೇಗೌಡ, ಶಿವಕುಮಾರ್, ಸತ್ಯನಾರಾಯಣ್ ರಾವ್ ಎಂ.ಜಿ., ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಜಿ.ಸವಿತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಸೇರಿದಂತೆ ಮತ್ತಿರರು ಇದ್ದರು.

