ಮಂಗಳೂರು: ಚಾರ್ಮಡಿ ಘಾಟ್ ನಲ್ಲಿ ಕಸ ಬಿಸಾಕಿ ತೆರಳಿದ್ದ ವಾಹನ ಚಾಲಕನ ವಿರುದ್ಧ ಕೇಸ್ ದಾಖಲಿಸಿರುವ ಗಸ್ತು ಪೊಲೀಸರು, ಆತನಿಂದಲೇ ಕಸ ಎತ್ತಿಸಿರುವ ಘಟನೆ ನಡೆದಿದೆ.
ಚಾರ್ಮಡಿ ಘಾಟ್ ನಲ್ಲಿ ಹಾಸನ ಮೂಲದ ಎಳನೀರು ವಾಹನ ಚಾಲಕ ವಾಹನದಲ್ಲಿದ್ದ ಕಸವನ್ನು ಘಾಟಿಯಲ್ಲಿ ಎಸೆದು ಮಂಗಳೂರಿನಿಂದ ಕೊಟ್ಟಿಗೆಹಾರ ಕಡೆಗೆ ತೆರಳಿದ್ದ. ಚಾಲಕನ ಜಾಡು ಹಿಡಿದ ಗಸ್ತು ತಿರುಗುತ್ತಿದ್ದ ಬಣಕಲ್ ಪಿಎಸ್ ಐ ಡಿ.ವಿ.ರೇಣುಕಾ ನೇತೃತ್ವದ ತಂಡ ಗೇಟ್ ಬಳಿ ವಾಹನವನ್ನು ತಡೆದು, ಚಾಲಕನ ಸಮೇತ ವಾಹನವನ್ನು ವಾಪಸ್ ಕರೆಸಿದೆ.
ಚಾಲಕನಿಂದಲೇ ಅದೇ ವಾಹನದಲ್ಲಿ ಕಸವನ್ನು ತುಂಬಿಸಿದ್ದಾರೆ. ಬಳಿಕ ಬಣಕಲ್ ಠಾಣೆಯಲ್ಲಿ ಚಾಲಕನ ವಿರುದ್ಧ ಕೆಪಿ ಆಕ್ಟ್ ಅಡಿ ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ. ಚಾರ್ಮಡಿ ಘಾಟ್ ನಲ್ಲಿ ಚಾಲಕ ಬಿಸಾಕಿದ್ದ ಕಸವನ್ನು ಆತನಿಂದಲೇ ತೆಗೆಸಿ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಇತರ ವಾಹನ ಸವಾರರು ಈ ರೀತಿ ಮಾಡದಂತೆ ಜಾಗೃತಿ ಮೂಡಿಸಿದ್ದಾರೆ.