ನವದೆಹಲಿ: ಡಿಜಿಟಲ್ ಸೌಲಭ್ಯ ಕೂಡ ಮೂಲಭೂತ ಹಕ್ಕು ಎಂದು ಹೇಳಿರುವ ಸುಪ್ರೀಂಕೋರ್ಟ್ ಕೆವೈಸಿ ನಿಯಮಾವಳಿಯಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಮಹತ್ವದ ಆದೇಶ ನೀಡಿದೆ.
ಆಸಿಡ್ ದಾಳಿಗೆ ಒಳಗಾದವರು, ಅಂಗವಿಕಲರು ಕೆವೈಸಿ ಪೂರ್ಣಗೊಳಿಸಲು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಿಯಮಾವಳಿಯಲ್ಲಿ ಕೆಲವು ಬದಲಾವಣೆ ಮಾಡಬೇಕು. ಡಿಜಿಟಲ್ ಸೌಲಭ್ಯ ಕೂಡ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಅಂಧರು, ಆಸಿಡ್ ದಾಳಿಯ ಸಂತ್ರಸ್ತರಿಗೆ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಅನ್ವಯವಾಗುವ ನಿಯಮ ರೂಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಸಂವಿಧಾನದ 21ನೇ ವಿಧಿಯ ಪ್ರಕಾರ ನೀಡಲಾದ ಬದುಕಿಗೆ ಹಕ್ಕಿನಲ್ಲಿ ಡಿಜಿಟಲ್ ಸೌಲಭ್ಯ ಪಡೆಯುವುದು ಕೂಡ ಪ್ರಮುಖ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಎಲ್ಲರನ್ನೂ ಒಳಗೊಳ್ಳುವ ಕೆವೈಸಿ ನಿಯಮ ರೂಪಿಸಲು 20 ನಿರ್ದೇಶನಗಳನ್ನು ನೀಡಲಾಗಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ಅಂಗವಿಕಲರು ಅದರಲ್ಲೂ ಮುಖ್ಯವಾಗಿ ಅಂಧರು ಮತ್ತು ವಿರೂಪಗೊಂಡ ಮುಖ ಹೊಂದಿದವರು ಕೆವೈಸಿ ಪ್ರಕ್ರಿಯೆ ವೇಳೆ ಮುಖದ ಸರಿ ಹೊಂದಾಣಿಕೆ ಅಥವಾ ಕಣ್ಣು ಮಿಟುಕಿಸುವ ವೇಳೆ ಅನುಭವಿಸುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಇಂತಹ ನಿರ್ದೇಶನ ನೀಡಿದೆ. ಯಾವುದೇ ಬ್ಯಾಂಕ್ ಖಾತೆ ತೆರೆಯಲು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಆದರೆ, ಆನ್ಲೈನ್ ಕೆವೈಸಿಯಿಂದ ಅಂಧರು ಮತ್ತು ಆಸಿಡ್ ದಾಳಿಕೆ ಒಳಗಾದವರು ಸಮಸ್ಯೆ ಎದುರಿಸಬೇಕಾಗುತ್ತದೆ. ಇಂಥವರು ಡಿಜಿಟಲ್ ವ್ಯವಸ್ಥೆಯಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ ಕೆವೈಸಿ ವಿನ್ಯಾಸವನ್ನು ಎಲ್ಲರಿಗೂ ಸರಿಹೊಂದುವಂತೆ ಬದಲಾವಣೆ ಮಾಡಬೇಕೆಂದು ನಿರ್ದೇಶನ ನೀಡಿದೆ.