ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅಂತಿಮ ಸಿದ್ಧಗಳು ನಡೆದಿವೆ. ಆದರೆ ದಸರಾ ಸಂಭ್ರಮದ ನಡುವೆಯೇ ಮೈಸೂರಿನಲ್ಲಿ ಕೆಲ ಸಂಘಟನೆಗಳಿಂದ ಮಹಿಷ ದಸರಾ ಆಚರಣೆಗೆ ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.
ಮೈಸೂರಿನಲ್ಲಿ ಮಹಿಷ ದಸರಾ ಆಚರಣಾ ಸಮಿತಿ ಮಹಿಷ ದಸರಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಚಾಮುಂಡಿ ಬೆಟ್ಟದಲ್ಲಿ ಆಚರಣೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಆದರೆ, ನಗರದ ಪುರಭವನದಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಲಾಗಿದೆ.
ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ತೊಂದರೆಯಾಗುವ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೈಸೂರು ದಸರಾ ಅದರಲ್ಲೂ ವಿಶ್ವ ವಿಖ್ಯಾತ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಜಂಬೂಸವಾರಿ ವೀಕ್ಷಣೆಗೆ ನೀಡಲಾಗುವ ಗೋಲ್ಡ್ ಪಾಸ್ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಎರಡನೇ ಹಂತದ ಸಿಡಿಮದ್ದು ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿದೆ. ಏಳು ಫಿರಂಗಿಗಳ ಮೂಲಕ ಮೂರು ಸುತ್ತುಗಳಲ್ಲಿ ಒಟ್ಟು 21 ಬಾರಿ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗಿದೆ. ಸಿಡಿಮದ್ದಿನ ಭಾರೀ ಶಬ್ದಕ್ಕೂ ದಸರಾ ಆನೆಗಳು ಬೆದರದೆ ನಿಂತು ಶಬ್ದಾಭ್ಯಾಸದಲ್ಲಿ ಪಾಲ್ಗೊಂಡಿವೆ.
ಇನ್ನು ಮರದ ಅಂಬಾರಿ ಹೊರುವ ತಾಲೀಮು ವೇಳೆ ಅರ್ಧ ದಾರಿಯಲ್ಲೇ ನಿಂತಿದ್ದ ಮಹೇಂದ್ರ ಆನೆಯನ್ನು ಈ ಬಾರಿಯ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಧನಂಜಯ, ಪ್ರಶಾಂತ, ಸುಗ್ರೀವ ಹಾಗೂ ಏಕಲವ್ಯ ಆನೆಗಳು ಮರದ ಅಂಬಾರಿ ಹೊರುವ ತಾಲೀಮಿನಲ್ಲಿ ಸಮರ್ಥವಾಗಿ ಪಾಲ್ಗೊಳ್ಳುತ್ತಿವೆ.
ಮತ್ತೊಂದೆಡೆ ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಭದ್ರತೆಗಾಗಿ 6 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಮೈಸೂರು ದಸರಾ ಮಹೋತ್ಸ: ಬಿಗಿ ಭದ್ರತೆ; 6000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ; ಮರ, ಕಟ್ಟಡಗಳ ಮೇಲೇರಿ ಜಂಬೂ ಸವಾರಿ ವೀಕ್ಷಣೆಗೆ ನಿಷೇಧ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅರಮನೆ ನಗರಿ ಮೈಸೂರುನಲ್ಲಿ ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿಯ ದಸರಾ ಉತ್ಸವಕ್ಕೆ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ 6000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶಿಥಿಲಗೊಂಡ ಕಟ್ಟಡ ಮತ್ತು ಮರಗಳಲ್ಲಿ ಕುಳಿತು ಜಂಬೂಸವಾರಿ ವೀಕ್ಷಣೆಗೆ ಈ ಬಾರಿ ನಿಷೇಧ ಹೇರಲಾಗಿದೆ. ಈ ಬಗ್ಗೆ ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಅಹಿತಿ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸೀಮಾ ಲಾಟ್ಕರ್, ಈ ಬಾರಿಯ ನಾಡ ಹಬ್ಬ ಮೈಸೂರು ದಸರಾಗೆ 5,161 ಸಿವಿಲ್ ಹಾಗೂ ಸಂಚಾರಿ ಪೊಲೀಸರು, 33 ಕೆಎಸ್ಆರ್ಪಿ ತುಕಡಿ, 25 ಡಿಎಆರ್ ತುಕಡಿ, 1500 ಹೋಮ್ ಗಾರ್ಡ್ಗಳು ಸೇರಿದಂತೆ ಆರು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದರು.
ದಸರಾದ 11 ದಿನ ಒಟ್ಟು 18 ಪೊಲೀಸ್ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಅರಮನೆ ಸುತ್ತಮುತ್ತ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇರಲಿದ್ದು, 35,794 ಸಿಸಿ ಕ್ಯಾಮರಾ ಮೂಲಕ ಸಾರ್ವಜನಿಕರ ಮೇಲೆ ಕಣ್ಗಾವಲು ಇರಲಿದೆ ಎಂದು ತಿಳಿಸಿರು.
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಎಂದರೆ ಜಂಬೂಸವಾರಿ ಕಣ್ತುಂಬಿಕೊಳ್ಳಲು ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಶಿಥಿಲಗೊಂಡಿರುವ ಕಟ್ಟಡ ಮತ್ತು ಮರಗಳ ಮೇಲೆ ಕುಳಿತು ಜಂಬೂಸವಾರಿ ವೀಕ್ಷಣೆಗೆ ನಿಷೇಧಿಸಲಾಗಿದೆ. ಈಗಾಗಲೇ 92 ಹಳೆಯ ಕಟ್ಟಡಗಳನ್ನು ಗುರುತು ಮಾಡಲಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನಿಡಿದ್ದಾರೆ.

