ಚಾಮರಾಜನಗರ: ಕಾವೇರಿ ನದಿ ನೀರು ವಿವಾದದ ತೀವ್ರಗೊಂಡಿದ್ದು, ರೈತ ಸಂಘಟನೆಗಳ ಮುತ್ತಿಗೆ ಎಚ್ಚರಿಕೆ ಬೆನ್ನಲ್ಲೇ ಚಾಮರಾಜನಗರದ ಚಿತ್ರಮಂದಿರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಯದ ಜನನಾಯಗನ್ ಸಿನಿಮಾ ಪ್ರದರ್ಶನ ರದ್ದು ಮಾಡಲಾಗಿದೆ.
ಚಾಮರಾಜನಗರದ ಶ್ರೀ ಬಸವೇಶ್ವರ ಚಿತ್ರಮಂದಿರದ ಮಾಲೀಕರು, ತಮಿಳುನಾಡು ಸಿಎಂ ಹಾಗೂ ನಟ ವಿಜಯ್ ಅಭಿನಯದ ‘ಜನನಾಯಗನ್’ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಥಿಯೇಟರ್ ಸಿಬ್ಬಂದಿ ಬ್ಯಾನರ್-ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕರ್ನಾಟಕದಲ್ಲಿ ತೀವ್ರ ಬರಗಾಲವಿದ್ದರೂ ಪ್ರತಿದಿನ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವಂತೆ CWRC ಹಾಗೂ CWMA ಆದೇಶ ಹೊರಡಿಸಿರುವುದನ್ನು ಖಂಡಿಸಿ ಮಂಡ್ಯ, ಕಾವೇರಿ ಕೊಳ್ಳ ಭಾಗದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ನಡುವೆ ಮಂಡ್ಯ ಚಿತ್ರಮಂದಿರಗಳಲ್ಲಿಯೂ ಜನನಾಯಗನ್ ಚಿತ್ರ ಪ್ರದರ್ಶನ ರದ್ದುಗೊಳಿಸಬೇಕು ಹಾಗೂ ಕರ್ನಾಟಕದಲ್ಲಿ ಜನನಾಯಗನ್ ಪ್ರದರ್ಶ ಮಾಡದಂತೆ ರೈತರು ಹಾಗೂ ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ.
ಚಾಮರಾಜನಗರದಲ್ಲಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುವುದಾಗಿ ರೈತ ಸಂಘನೆಗಳು ಎಚ್ಚರಿಕೆ ನೀಡಿದ್ದವು. ಇದರ ಬೆನ್ನಲ್ಲೇ ಶ್ರೀ ಬಸವೇಶ್ವರ ಚಿತ್ರಮಂದಿರದಲ್ಲಿ ಜನನಾಯಗನ್ ಪ್ರದರ್ಶನ ರದ್ದುಗೊಳಿಸಲಾಗಿದೆ.

