ಚಾಮರಾಜನಗರ ಜಿಲ್ಲೆಯಲ್ಲಿ ರಾಜಮನೆತನದ ಖಾಸಗಿ ಸ್ವತ್ತು ವಿಚಾರ: ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ: ರಾಜಮಾತೆ ಪ್ರಮೋದಾದೇವಿ ಭರವಸೆ

ಮೈಸೂರು: ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ರಾಜಮನೆತನದ ಖಾಸಗಿ ಸ್ವತ್ತು ಇದ್ದು, ಈಗಾಗಲೇ ಅಲ್ಲಿ ವಾಸವಾಗಿರುವ ಗ್ರಾಮಸ್ಥರು, ಬೆಳೆಗಳನ್ನು ಬೆಳೆದಿರುವ ರೈತರು ತಾವು ಊರು ತೊರೆಯಬೇಕಾದ ಸ್ಥಿತಿ ಬಂದಿದೆ ಎಂದು ಜಿಲ್ಲಾಧಿಕಾರಿ ಮುಂದೆ ಸಮಸ್ಯೆ ತೋಡಿಕೊಂಡಿದ್ದರು. ಈ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಇದೀಗ ರಾಜಮಾತೆ ಪ್ರಮೋದಾದೇವಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಮೋದಾದೇವಿ, ಚಮರಾಜನಗರದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರು ನೀಡಿರುವ ದಾನದ ಬಗ್ಗೆ ಗೊತ್ತಿಲ್ಲ. ದಾನ ಪತ್ರ ಹಾಗೂ ದಾಖಲೆಗಳಿದ್ದರೆ ರೈತರು ತಂದುಕೊಡಲಿ. ಮಹಾರಾಜರು ಜಮೀನು ನೀಡಿದ್ದರೆ ಅದನ್ನು ನಾವು ಕಿತ್ತುಕೊಳ್ಳುವುದಿಲ್ಲ ಎಂದು ಹೇಳಿದರು.

ಖಾಸಗಿ ಸ್ವತ್ತಿನ ಜಮೀನುಗಳಿರುವ ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ಮಾಡುವುದಾಗಿ ಜಿಲ್ಲಾಡಳಿತ ಹೇಳಿರುವುದರಿಂದ ಮಾರ್ಚ್ 29ರಂದು ಪತ್ರ ಬರೆಯಲಾಗಿದೆ. ಅಲ್ಲಿನ ಜಿಲ್ಲಾಢಿಕಾರಿಗಳಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ. ಹಲವು ಬಾರಿ ಕರೆ ಮಾಡಿದೇನೆ, ಸಂದೇಶ ಕಳುಹಿಸಿದ್ದೇನೆ ಎಂದರು.

2014ರಲ್ಲಿಯೇ ಜಿಲ್ಲೆಯಲ್ಲಿನ ರಾಜಮನೆತನದ ಆಸ್ತಿ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಎಲ್ಲಾ ಇಲಾಖೆಗೂ ಮಾಹಿತಿ ನೀಡಿ, ಸ್ವೀಕೃತಿ ಪತ್ರವನ್ನು ಪಡೆದಿದ್ದೇವೆ. ಆಗಿನ ಮುಖ್ಯಕಾರ್ಯದರ್ಶಿ ಶ್ರೀನಿವಾಸ್ ಸಹಿಯೂ ಇದೆ. 2020ರಲ್ಲಿ ಒಬ್ಬರು ಸರ್ವೆ ಸಂಖ್ಯೆಯೊಂದರ ಆಸ್ತಿ ಮೇಲೆ ಕೇಸ್ ಹಾಕಿದ್ದರು. ಬಳಿಕ ಕೇಸ್ ಕೂಡ ನಮ್ಮ ಪರವಾಗಿ ಆಗಿದೆ. ಎಲ್ಲಾ ದಾಖಲೆಗಳನ್ನು ಆಧರಿಸಿಯೇ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಪತ್ರ ಬರೆಯಲಾಗಿದೆ. ಆದರೆ ಅಲ್ಲಿನ ಜಿಲ್ಲಾಧಿಕಾರಿ ತಮಗೆ ಮಾಹಿತಿ ಇಲ್ಲ ಎಂದೇ ಹೇಳುತ್ತಿದ್ದಾರೆ. ಗ್ರಾಮಸ್ಥರು ಯಾವುದೇ ಸಮಸ್ಯೆ, ವಿಚಾರಗಳಿದ್ದರೂ ನೇರವಾಗಿ ನಮ್ಮ ಕಚೇರಿ ಸಂಪರ್ಕಿಸಬಹುದು ಎಂದರು.

ದಾನ ಕೊಟ್ಟಿದ್ದರೆ ಅದನ್ನು ವಾಪಾಸ್ ಪಡೆಯಲ್ಲ. ಕಂದಾಯ ಗ್ರಾಮ ಪ್ರಸ್ತಾಪ ಬಂದಾಗ ಗ್ರಾಮಸ್ಥರು ನಮ್ಮ ಗಮನಕ್ಕೆ ತಂದಿದ್ದರೆ ಗೊಂದಲವಾಗುತ್ತಿರಲಿಲ್ಲ. ಈಗಲೂ ಗ್ರಾಮಸ್ಥರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಜಮೀನು ನಮ್ಮ ಹೆಸರಿಗೆ ಬಂದರೂ ದಾನ ಪತ್ರದ ದಾಖಲೆ ತೋರಿದರೆ ಸರ್ಕಾರದ ಮಧ್ಯಸ್ಥಿಕೆ ಇಲ್ಲದೇ ಅವರಿಗೆ ಹೇಗೆ ಜಮೀನು ಕೊಡಬೇಕು ಎಂಬುದು ಗೊತ್ತಿದೆ. ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗಲ್ಲ ಎಂದು ಭರವಸೆ ನೀಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read