ಬೆಂಗಳೂರು,-ಚಾಮರಾಜನಗರದ ಅರಣ್ಯದಲ್ಲಿ ಸ್ಥಳೀಯರನ್ನು ಅರಣ್ಯ ಇಲಾಖೆ ಸಿಬ್ಬಂದಿ ಎನ್ಕೌಂಟರ್ ಮಾಡಿದ್ದಾರೆ. ಇದು ಸರ್ಕಾರವೇ ಮಾಡಿದ ಕೊಲೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸದನದಲ್ಲಿ ಮಾತನಾಡಿದ ಅವರು, ಘಟನೆಯಲ್ಲಿ ಗಾಯಗೊಂಡ ನಾಲ್ಕನೇ ವ್ಯಕ್ತಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದಿಢೀರನೆ ಆ ವ್ಯಕ್ತಿ ಮಾಯವಾಗಿದ್ದಾನೆ. ಸರ್ಕಾರದ ನೀಡಿದ ಸ್ಪಷ್ಟೀಕರಣದಲ್ಲಿ ಈ ವ್ಯಕ್ತಿಯ ಹೇಳಿಕೆಯನ್ನು ಉಲ್ಲೇಖಿಸಿಲ್ಲ. ಮೃತರಾದ ಮೂವರು ವೀರಪ್ಪನ್ನಂತೆ ಕಾಡುಗಳ್ಳರಾಗಿದ್ದರೆ ಇವರ ಪರವಾಗಿ ಅಷ್ಟೊಂದು ರೈತರು ಪ್ರತಿಭಟನೆ ಮಾಡುತ್ತಿರಲಿಲ್ಲ. ಮೃತರು ಅರಣ್ಯ ಅಪರಾಧ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿಲ್ಲ ಎಂದು ಸರ್ಕಾರವೇ ಹೇಳಿದೆ. ಅಂದಮೇಲೆ ಅವರನ್ನು ಏಕೆ ಎನ್ಕೌಂಟರ್ ಮಾಡಲಾಗಿದೆ? ಇವರಿಗೆ ಅಪರಾಧಗಳ ಇತಿಹಾಸವೇ ಇದ್ದಿದ್ದರೆ ರೌಡಿಶೀಟರ್ನಲ್ಲಿ ಇವರ ಹೆಸರು ಇರಬೇಕಿತ್ತು ಎಂದರು.
ಸಮೀಪದಿಂದ ಗುಂಡು: ಇದು ಪ್ರತಿ ದಾಳಿ ಅಲ್ಲ
ಅರಣ್ಯ ಸಿಬ್ಬಂದಿ ಅರ್ಧ ಕಿ.ಮೀ. ದೂರದಿಂದ ಗುಂಡು ಹಾರಿಸಿಲ್ಲ. ಬಹಳ ಸಮೀಪದಿಂದ ಗುಂಡು ಹಾರಿಸಿದ್ದಾರೆ. ಅಂದಮೇಲೆ ಇದು ಪ್ರತಿ ದಾಳಿ ಎಂದು ಹೇಳಲಾಗುವುದಿಲ್ಲ. ಅರಣ್ಯ ಸಿಬ್ಬಂದಿಗೆ ಆತ್ಮರಕ್ಷಣೆಗೆ ಗುಂಡು ಹಾರಿಸುವ ಅಧಿಕಾರವಿದೆ. ಅದೇ ರೀತಿ ಜನರಿಗೂ ತಮ್ಮ ಪ್ರಾಣ ರಕ್ಷಿಸಿಕೊಳ್ಳುವ ಅಧಿಕಾರವಿದೆ. ಸಮೀಪ ಇರುವಾಗ ಕಾಲಿಗೆ ಗುಂಡು ಹೊಡೆಯಬಹುದಿತ್ತು. ಅದನ್ನು ಬಿಟ್ಟು ಎದೆಗೆ, ಕುತ್ತಿಗೆಗೆ ಗುಂಡು ಹಾರಿಸಿದ್ದಾರೆ. ಕಳ್ಳರಿದ್ದಾರೆ ಎಂದು ಮಾಹಿತಿ ಗೊತ್ತಾದಾಗ ಕೇವಲ ಮೂವರು ಸಿಬ್ಬಂದಿ ಏಕೆ ಹೋದರು? ಸಾಮಾನ್ಯವಾಗಿ ಅರಣ್ಯದಲ್ಲಿ ಹಲವಾರು ಸಿಬ್ಬಂದಿ ಇರುತ್ತಾರೆ. ನೂರಾರು ಸಿಬ್ಬಂದಿ ಇರುವಾಗ ಅವರನ್ನು ಸೆರೆ ಹಿಡಿಯಬಹುದಿತ್ತು. ಮೂವರನ್ನು ಸಾಯಿಸುವ ಅಗತ್ಯವೇನಿತ್ತು? ಒಬ್ಬನಿಗೆ ಗುಂಡು ಹಾರಿಸಿದ್ದರೆ ಉಳಿದವರು ಓಡಿ ಹೋಗುತ್ತಿದ್ದರು. ಅದನ್ನೂ ಮಾಡದೆಯೇ ಮೂವರನ್ನೂ ಸಾಯಿಸಿದ್ದಾರೆ ಎಂದರು.
ಅರಣ್ಯ ಬಳಿ ವಾಸಿಸುವ ಜನರು ಸೌದೆ ತರಲು, ದನ ಮೇಯಿಸಲು ಕಾಡೊಳಗೆ ಹೋಗುವುದು ಸಹಜ. ಅವರು ಕಾಡನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುತ್ತಾರೆ. ಈ ರೀತಿ ಹೆದರಿಸಿದರೆ ಯಾರೂ ಕಾಡಿನೊಳಗೆ ಹೋಗಲು ಸಾಧ್ಯವಾಗುವುದಿಲ್ಲ.
*ಖಂಡನಾ ನಿರ್ಣಯ*
ತಮಿಳುನಾಡು ಮುಖ್ಯಮಂತ್ರಿ ಖಂಡನೆ, ಸರ್ಕಾರದ ಮೌನ
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಈ ಘಟನೆಯನ್ನು ಖಂಡಿಸಿದ್ದರೂ, ಸ್ಪಷ್ಟೀಕರಣ ನೀಡಬೇಕೆಂದು ಕಾಂಗ್ರೆಸ್ ಸರ್ಕಾರಕ್ಕೆ ಅನ್ನಿಸಲೇ ಇಲ್ಲ. ಕಾಂಗ್ರೆಸ್ ಸರ್ಕಾರದಿಂದ ತಮಿಳರ ಹತ್ಯೆ, ತಮಿಳರನ್ನು ಹತ್ಯೆ ಮಾಡಿರುವುದು ಖಂಡನೀಯ ಎಂದು ಸರ್ಕಾರವೇ ಹೇಳಿದೆ. ಸಿಎಂ ವಿಜಯ್ ಅವರು ಸರ್ಕಾರದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಮಿತ್ರಪಕ್ಷವೇ ಹೀಗೆ ಹೇಳಿಕೆ ನೀಡಿರುವಾಗಲೂ ಅದಕ್ಕೆ ಸರ್ಕಾರ ಸ್ಪಷ್ಟನೆ ನೀಡಿಲ್ಲ ಎಂದರು.
*ಸಚಿವರ ರಾಜೀನಾಮೆ ಪಡೆಯಲಾಗಿದೆ*
ನಾಗೇಂದ್ರ ವಜಾ ಆಗ್ರಹ
ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಲೂಟಿಯಾಗಿರುವುದು ಸಾಬೀತಾಗಿದೆ. ಈಗ ಮತ್ತೆ ಅವರು ಸಂಪುಟಕ್ಕೆ ಬಂದಿದ್ದಾರೆ. ಅವರು ಸಚಿವರಾಗಿರುವಾಗ ಸದನ ನಡೆಸಲು ಅವಕಾಶ ನೀಡುವುದಿಲ್ಲ. ಆದ್ದರಿಂದ ಸಚಿವ ಬಿ.ನಾಗೇಂದ್ರ ಅವರನ್ನು ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

