ಕೇಂದ್ರ ಸರ್ಕಾರವು ಅನಿವಾಸಿ ಭಾರತೀಯರು ಮತ್ತು ಪ್ರವಾಸಿಗರಿಗೆ ದೊಡ್ಡ ಸಮಾಧಾನ ನೀಡುವಂತಹ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ವಿದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರು ತರುವ ಉಡುಗೊರೆ ಹಾಗೂ ವೈಯಕ್ತಿಕ ಬಳಕೆಯ ವಸ್ತುಗಳ ಮೇಲಿನ ಸುಂಕ ರಹಿತ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಹೊಸ ನಿಯಮಗಳು ಫೆಬ್ರವರಿ 2 ರಿಂದಲೇ ಜಾರಿಗೆ ಬರಲಿವೆ ಎಂದು ಸರ್ಕಾರ ಘೋಷಿಸಿದೆ.
ಈ ಮೊದಲು ಜಾರಿಯಲ್ಲಿದ್ದ 2016ರ ಬ್ಯಾಗೇಜ್ ನಿಯಮಗಳನ್ನು ಬದಲಿಸಿರುವ ಸರ್ಕಾರ, ಈಗ ಬ್ಯಾಗೇಜ್ ನಿಯಮಗಳು 2026 ಅನ್ನು ಜಾರಿಗೆ ತಂದಿದೆ. ಇದರ ಅನ್ವಯ ಭಾರತೀಯ ನಿವಾಸಿಗಳು ಮತ್ತು ಭಾರತೀಯ ಮೂಲದ ಪ್ರವಾಸಿಗರು ವಿಮಾನ ಅಥವಾ ಹಡಗಿನ ಮೂಲಕ ಆಗಮಿಸುವಾಗ ತಮ್ಮೊಂದಿಗೆ 75,000 ರೂಪಾಯಿ ಮೌಲ್ಯದ ವಸ್ತುಗಳನ್ನು ಯಾವುದೇ ಕಸ್ಟಮ್ಸ್ ಸುಂಕ ಪಾವತಿಸದೆ ತರಬಹುದಾಗಿದೆ. ಈ ಹಿಂದೆ ಈ ಮಿತಿಯು ಕೇವಲ 50,000 ರೂಪಾಯಿ ಆಗಿತ್ತು. ಒಂದು ದಶಕದ ಬಳಿಕ ಈ ನಿಯಮದಲ್ಲಿ ಬದಲಾವಣೆ ತರಲಾಗಿದ್ದು, ಇದರಿಂದ ಪ್ರವಾಸ ಮುಗಿಸಿ ಮರಳುವ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
ವಿದೇಶಿ ಮೂಲದ ಪ್ರವಾಸಿಗರಿಗೂ ಈ ಸೌಲಭ್ಯ ದೊರೆಯಲಿದ್ದು, ಅವರ ಸುಂಕ ರಹಿತ ಮಿತಿಯನ್ನು 15,000 ರೂಪಾಯಿಯಿಂದ 25,000 ರೂಪಾಯಿಗೆ ಏರಿಸಲಾಗಿದೆ. ಇನ್ನು ಶಿಶುಗಳ ವಿಷಯಕ್ಕೆ ಬಂದರೆ, ಅವರು ಬಳಸುವ ದೈನಂದಿನ ಅವಶ್ಯಕತೆಯ ವಸ್ತುಗಳು ಮತ್ತು ಪ್ರವಾಸದ ಸವಿನೆನಪಿಗಾಗಿ ತರುವ ವಸ್ತುಗಳಿಗೆ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಚಿನ್ನಾಭರಣಗಳ ವಿಷಯದಲ್ಲಿ ನಿಯಮಗಳನ್ನು ಸ್ಪಷ್ಟಪಡಿಸಲಾಗಿದ್ದು, ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿ ಮರಳುವ ಭಾರತೀಯರು ಕೆಲವು ನಿಬಂಧನೆಗಳೊಂದಿಗೆ ಆಭರಣ ತರಬಹುದು. ಮಹಿಳಾ ಪ್ರಯಾಣಿಕರಿಗೆ 40 ಗ್ರಾಂ ವರೆಗೆ ಮತ್ತು ಇತರರಿಗೆ 20 ಗ್ರಾಂ ವರೆಗೆ ಚಿನ್ನಾಭರಣಗಳನ್ನು ತೆರಿಗೆ ಇಲ್ಲದೆ ತರಲು ಅವಕಾಶವಿದೆ. ಆದರೆ ಇವುಗಳು ವೈಯಕ್ತಿಕ ಬಳಕೆಯದ್ದಾಗಿರಬೇಕು ಎಂಬುದು ಕಡ್ಡಾಯ.
ವಿಮಾನ ಮತ್ತು ಹಡಗಿನ ಸಿಬ್ಬಂದಿಗಳಿಗೂ ಈ ಹೊಸ ನಿಯಮ ಅನ್ವಯವಾಗಲಿದ್ದು, ಅವರು ತಮ್ಮ ಕೆಲಸದ ಅವಧಿ ಮುಗಿಸಿ ಅಂತಿಮವಾಗಿ ಮರಳುವಾಗ ತಮ್ಮ ಬ್ಯಾಗೇಜ್‌ಗಳನ್ನು ಸುಂಕ ರಹಿತವಾಗಿ ತರಬಹುದು. ಅಲ್ಲದೆ ಸಾಮಾನ್ಯ ದಿನಗಳಲ್ಲಿ ಚಾಕೊಲೇಟ್, ಸೌಂದರ್ಯವರ್ಧಕಗಳು ಮತ್ತು ಸಣ್ಣಪುಟ್ಟ ಗಿಫ್ಟ್ ಐಟಂಗಳನ್ನು 2,500 ರೂಪಾಯಿ ಮಿತಿಯೊಳಗೆ ತರಲು ಅನುಮತಿ ನೀಡಲಾಗಿದೆ.

