ದೇಶಾದ್ಯಂತ ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪೆನ್ಷನರ್‌ಗಳು 8ನೇ ವೇತನ ಆಯೋಗದ (8th Pay Commission) ಜಾರಿಯ ನಿರೀಕ್ಷೆಯಲ್ಲಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು, ನೌಕರರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಹೊಸ ಜಾಲವನ್ನು ಹೆಣೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುರ್ತು ಎಚ್ಚರಿಕೆಯನ್ನು ನೀಡಿದೆ.
ವಂಚಕರು ವಾಟ್ಸಾಪ್ ಮೂಲಕ ನೌಕರರಿಗೆ ಆಕರ್ಷಕ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. “8ನೇ ವೇತನ ಆಯೋಗದ ಅಡಿಯಲ್ಲಿ ನಿಮ್ಮ ಸಂಬಳ ಎಷ್ಟು ಹೆಚ್ಚಾಗಲಿದೆ ಎಂಬುದನ್ನು ಈ ‘ಸ್ಯಾಲರಿ ಕ್ಯಾಲ್ಕುಲೇಟರ್’ ಮೂಲಕ ಈಗಲೇ ಪರಿಶೀಲಿಸಿ” ಎಂದು ನಂಬಿಸಿ ಒಂದು ಲಿಂಕ್ ನೀಡಲಾಗುತ್ತದೆ. ಬರಲಿರುವ 8ನೇ ವೇತನ ಆಯೋಗದ (8th Pay Commission) ಅಡಿಯಲ್ಲಿ ಸಂಬಳದ ಹೆಚ್ಚಳದ ವಿವರಗಳನ್ನು ಒದಗಿಸುವುದಾಗಿ ನಂಬಿಸಿ, ನೌಕರರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುವ ಸಂಚು ನಡೆಯುತ್ತಿದೆ.
ವಂಚನೆ ನಡೆಯುವುದು ಹೇಗೆ?
ವಂಚಕರು ನೌಕರರಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿ, ಪರಿಷ್ಕೃತ ವೇತನವನ್ನು ಲೆಕ್ಕಹಾಕಲು (Salary Calculator) ಒಂದು ಲಿಂಕ್ ಕ್ಲಿಕ್ ಮಾಡುವಂತೆ ಕೇಳುತ್ತಾರೆ.
- ಆ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಒಂದು APK ಫೈಲ್ ಅನ್ನು ಡೌನ್ಲೋಡ್ ಮಾಡಲು ಸೂಚಿಸಲಾಗುತ್ತದೆ.
- ಇದು ಸಾಮಾನ್ಯ ಸ್ಯಾಲರಿ ಕ್ಯಾಲ್ಕುಲೇಟರ್ ಆ್ಯಪ್ನಂತೆ ಕಂಡರೂ, ವಾಸ್ತವದಲ್ಲಿ ಇದೊಂದು ಅಪಾಯಕಾರಿ ಮಾಲ್ವೇರ್ (Malware) ಆಗಿದೆ.
- ಈ ಆ್ಯಪ್ ಇನ್ಸ್ಟಾಲ್ ಮಾಡಿದ ತಕ್ಷಣ, ವಂಚಕರು ನಿಮ್ಮ ಮೊಬೈಲ್ನ ಸಂಪೂರ್ಣ ನಿಯಂತ್ರಣವನ್ನು (Remote Access) ಪಡೆಯುತ್ತಾರೆ.
- ಇದರ ಮೂಲಕ ನಿಮ್ಮ ಬ್ಯಾಂಕಿಂಗ್ ವಿವರಗಳು ಮತ್ತು ಖಾಸಗಿ ಮಾಹಿತಿಯನ್ನು ಕದ್ದು, ಅನಧಿಕೃತವಾಗಿ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ.
8ನೇ ವೇತನ ಆಯೋಗವು ಸುಮಾರು ಒಂದು ಕೋಟಿಗೂ ಹೆಚ್ಚು ನೌಕರರು ಮತ್ತು ಪೆನ್ಷನರ್ಗಳಿಗೆ ಸಂಬಂಧಿಸಿದ್ದರಿಂದ, ಜನರ ಕುತೂಹಲವನ್ನೇ ವಂಚಕರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಸರ್ಕಾರಿ ನೌಕರರಿಗೆ ಪ್ರಮುಖ ಸೂಚನೆಗಳು
ಸರ್ಕಾರವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನೌಕರರು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸಲು ಸೂಚಿಸಿದೆ:
• ಅಧಿಕೃತವಲ್ಲದ ಲಿಂಕ್ಗಳು: ವಾಟ್ಸಾಪ್ ಅಥವಾ ಇತರ ಮೆಸೇಜಿಂಗ್ ಆ್ಯಪ್ಗಳ ಮೂಲಕ ಬರುವ ಯಾವುದೇ APK ಫೈಲ್ಗಳನ್ನು ಸರ್ಕಾರ ಕಳುಹಿಸುವುದಿಲ್ಲ.
• ಅಧಿಕೃತ ವೆಬ್ಸೈಟ್ ಮಾತ್ರ ಬಳಸಿ: ವೇತನ ಅಥವಾ ಪೆನ್ಷನ್ಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ಗಳನ್ನು ಮಾತ್ರ ಸಂಪರ್ಕಿಸಿ.
• ಅಭಿಪ್ರಾಯ ಸಂಗ್ರಹ: 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯಲು ಸರ್ಕಾರವು ಈಗಾಗಲೇ ಅಧಿಕೃತ ವೆಬ್ಸೈಟ್ ಪ್ರಾರಂಭಿಸಿದೆ. ಮಾಹಿತಿಗಾಗಿ ಆ ವೇದಿಕೆಯನ್ನು ಮಾತ್ರ ಬಳಸಿ.
• ಜಾಗರೂಕರಾಗಿರಿ: ಅಪರಿಚಿತ ಮೂಲಗಳಿಂದ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಯಾವುದೇ ಆ್ಯಪ್ಗಳನ್ನು ಡೌನ್ಲೋಡ್ ಮಾಡಬೇಡಿ.

