ಬೆಂಗಳೂರು: ಉಪಚುನಾವಣೆ ವೇಳೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ಬಿಡುಗಡೆ ಮಾಡಿದ ಸಂಬಂಧ ಕೇಂದ್ರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ ಪವನ್ ದಿವಾನ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶಕ್ತಿ, ಗೃಹಜ್ಯೋತಿ, ಅನ್ನ ಭಾಗ್ಯ, ಯುವನಿಧೀ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿರುವ ಬಗ್ಗೆ ಮಾಹಿತಿ ಸ್ವೀಕರಿಸಲಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಕೇಂದ್ರ ಚುನಾವಣಾ ಆಯೋಗದ ಪೂರ್ವಾನುಮತಿ ಇಲ್ಲದೆ ಕಲ್ಯಾಣ ಯೋಜನೆಗಳಿಗೆ ಯಾವುದೇ ಹಣ ಬಿಡುಗಡೆ ಮಾಡಬಾರದು. ಹೀಗಾಗಿ ಎರಡು ಜಿಲ್ಲೆಗಳಲ್ಲಿ ಈ ಐದು ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದ ಅಧಿಕಾರಿ ಹೆಸರು ಹಂಚಿಕೊಳ್ಳಬೇಕು. ಇದುವರೆಗೆ ಯಾವುದೇ ಹಣ ಮಂಜೂರಾತಿ, ವಿತರಣೆ ಮಾಡಿದ್ದರೆ ಆಯೋಗದ ಅನುಮತಿ ಇಲ್ಲದೆ ಮಾಡಬಾರದು ಎಂದು ತಿಳಿಸಿದ್ದಾರೆ.

