ಬೆಂಗಳೂರಿನಿಂದ ಮುಂಬೈಗೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಸಂಚರಿಸಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿಗೆ ಸ್ಪಂದಿಸಿ, ನೂತನ ವಂದೇ ಭಾರತ್ ಸ್ಲೀಪರ್ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಗೆ ಸಂಚರಿಸಲಿದೆ.
ಹಾಗೂ, ಬೆಂಗಳೂರಿನಿಂದ ಕರ್ನಾಟಕದ ಮಧ್ಯಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ತೆರಳಲು ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಸಚಿವ ಪ್ರಲ್ಹಾದ್ ಜೋಶಿ ಮನವಿಯ ಮೇರೆಗೆ ಈಗಾಗಲೇ ಅನುಮೋದನೆ ನೀಡಲಾಗಿತ್ತು.
ಈ ಸೂಪರ್ ಫಾಸ್ಟ್ ರೈಲನ್ನು ಶೀಘ್ರವೇ ಪ್ರಾರಂಭಿಸುವುದಾಗಿ, ತದನಂತರದ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲಾಗಿ ಬದಲಾಯಿಸುವಂತೆ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಹೇಳಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಪರವಾಗಿ ಧನ್ಯವಾದಗಳು ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ರಾಜ್ಯದ ಅಭಿವೃದ್ದಿಯ ಜೊತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವ ಹಾಗೂ ರಾಜ್ಯದಲ್ಲಿನ ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಸಂಚಾರ ಸೌಲಭ್ಯವನ್ನು ಈ ನೂತನ ವಂದೇ ಭಾರತ್ ರೈಲು ಬಲವರ್ಧಿಸಲಿದೆ.
ನೂತನ ವಂದೇ ಭಾರತ್ ಸ್ಲೀಪರ್ ರೈಲನ್ನು ಐಟಿ ಸಿಟಿ ಬೆಂಗಳೂರು – ವಾಣಿಜ್ಯ ನಗರಿ ಮುಂಬೈ ಮಧ್ಯೆ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಪ್ರಲ್ಹಾದ್ ಜೋಶಿ ಧನ್ಯವಾದ ಹೇಳಿದ್ದಾರೆ.

