ಬೆಂಗಳೂರು: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ CWRC ಹಾಗೂ CWMA ನೀಡಿರುವ ಆದೇಶ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ. ಕೆ.ಆರ್.ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕರ್ನಾಟಕದಲ್ಲಿ ನೀರಿನ ಅಭಾವದಿಂದ ರೈತರು ಸಂಕಷ್ಟಕ್ಕೀಡಾಗಿದ್ದರೂ CWRC ಹಾಗೂ CWMA ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ ನೀಡಿರುವುದು ಖಂಡನೀಯ. ಪ್ರಾಧಿಕಾರಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಈ ಆದೇಶವನ್ನು ಕಹ್ಂಡಿಸಿ ಹಾಗೂ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು, ರೈತ ಸಂಗಹ್ಟನೆಗಳು ಇಂದು ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು.
ಬೆಂಗಳೂರಿನಿಂದ ಕನ್ನಂಬಾಡಿವರೆಗೂ ರ್ಯಾಲಿ ನಡೆಸುತ್ತಿದ್ದೇವೆ. ಮಾರ್ಗ ಮಧ್ಯೆ ಇನ್ನೂ ಹಲವು ಕನ್ನಡಪರ ಕಾರ್ಯಕರ್ತರನ್ನು ಸೇರಿಸಿಕೊಂಡು, ನೂರಾರು ವಾಹನಗಳಲ್ಲಿ ಕೆಆರ್ಎಸ್ ಡ್ಯಾಂ ತಲುಪುತ್ತೇವೆ. ಅಲ್ಲಿ ಡ್ಯಾಂ ಗೆ ಮುತ್ತಿಗೆ ಹಾಕುತ್ತೇವೆ ಎಂದರು.
ರಾಜ್ಯ ಸರ್ಕಾರ ಈಗಾಗಲೇ ತಮಿಳುನಾಡಿಗೆ ಸಾಕಷ್ಟು ನೀರನ್ನು ಬಿಡುಗಡೆ ಮಾಡಿದೆ ಎಂದು ಆರೋಪಿಸಿದರು. ಇದೀಗ ಕಾವೇರಿ ನೀರು ನಿರ್ವಹಣಾ ಸಮಿತಿಯು ಮತ್ತೆ 9,000 ಕ್ಯೂಸೆಕ್ ನೀರನ್ನು 15 ದಿನಗಳ ಕಾಲ ಬಿಡುವಂತೆ ಆದೇಶಿಸಿರುವುದು ರಾಜ್ಯಕ್ಕೆ ಬಹಳ ಹೊರೆಯಾಗಿದೆ. ಈ ನಿರ್ಧಾರದಿಂದ ಬೆಂಗಳೂರಿನಲ್ಲಿ ಭವಿಷ್ಯದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.
ಇತ್ತೀಚೆಗೆ ನಡೆದ ಅಸೆಂಬ್ಲಿ ಅಧಿವೇಶನದಲ್ಲಿ ಕಾವೇರಿ ನೀರು ಹಂಚಿಕೆ ಬಗ್ಗೆ ಗಂಭೀರ ಚರ್ಚೆ ನಡೆದಿಲ್ಲ. ಭ್ರಷ್ಟಾಚಾರದ ಆರೋಪಗಳು ಮತ್ತು ರಾಜಕೀಯ ಜಟಾಪಟಿಗಳ ನಡುವೆ ಕಾವೇರಿ ನೀರಿನಂತಹ ಪ್ರಮುಖ ವಿಷಯವನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶಗೊಂಡರು. ಬೆಂಗಳೂರು ಶಾಸಕರಿಗೆ ಮಾನ ಮರ್ಯಾದೆ ಇದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

