ನವದೆಹಲಿ: ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡುವ ಸೌಲಭ್ಯವನ್ನು 2024ರ ಮಾರ್ಚ್ ನಲ್ಲಿ ಪ್ರಾಯೋಗಿಕವಾಗಿ ಚಂಡೀಗಢದಲ್ಲಿ ಚಾಲನೆ ನೀಡಿದ್ದು, ನಂತರ ಆರು ರಾಜ್ಯಗಳಿಗೆ ಇದನ್ನು ವಿಸ್ತರಿಸಲಾಗಿತ್ತು. ಈಗ ಪ್ರಧಾನಿ ಮೋದಿ ಅವರು ದೇಶಾದ್ಯಂತ ಯೋಜನೆ ವಿಸ್ತರಿಸುವ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಯೋಜನೆ ಅಡಿಯಲ್ಲಿ ಗಾಯಾಳುಗಳಿಗೆ ತಲಾ 1.5 ಲಕ್ಷ ರೂಪಾಯಿವರೆಗೆ ಅಪಘಾತ ನಡೆದ ದಿನದಿಂದ 7 ದಿನದವರೆಗೆ ನಗದು ರಹಿತವಾಗಿ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ. ದೇಶದ ಯಾವುದೇ ರಸ್ತೆಯಲ್ಲಿ ಮೋಟಾರ್ ವಾಹನಗಳಿಂದ ಉಂಟಾಗಿರುವ ಅಪಘಾತಗಳಲ್ಲಿ ಗಾಯಗೊಂಡವರು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ.

