ಆರೋಗ್ಯವಾಗಿರಲು ಮತ್ತು ತೂಕ ಇಳಿಸಿಕೊಳ್ಳಲು ಹೆಚ್ಚಿನವರು ಮಾಡುವ ಮೊದಲ ಕೆಲಸವೆಂದರೆ ಆಹಾರದಲ್ಲಿ ಸಕ್ಕರೆ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು. ಮಧುಮೇಹ ನಿಯಂತ್ರಣ ಮತ್ತು ಫಿಟ್ನೆಸ್ ಹೆಸರಿನಲ್ಲಿ ಸಕ್ಕರೆಯಿಂದ ದೂರವಿರಲು ತಜ್ಞರು ಕೂಡ ಸಲಹೆ ನೀಡುತ್ತಾರೆ. ಆದರೆ, ಆಹಾರಕ್ರಮದಿಂದ ಸಕ್ಕರೆಯನ್ನು ಸಂಪೂರ್ಣವಾಗಿ ಹೊರಗಿಡುವುದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಇತ್ತೀಚಿನ ಹೊಸ ಸಂಶೋಧನೆಯೊಂದು ಎಚ್ಚರಿಸಿದೆ. ಚಿಕಾಗೋದಲ್ಲಿ ನಡೆದ ಎಂಡೋ ೨೦೨೬ ವಾರ್ಷಿಕ ಸಭೆಯಲ್ಲಿ ಮಂಡಿಸಲಾದ ವರದಿಯ ಪ್ರಕಾರ, ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ ಕರುಳಿನ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯಲ್ಲಿ (ಮೆಟಾಬಾಲಿಸಂ) ಅನಿರೀಕ್ಷಿತ ಏರುಪೇರಾಗಬಹುದು ಎಂದು ತಿಳಿದುಬಂದಿದೆ.
ಸಂಶೋಧನೆಯಲ್ಲಿ ಬಹಿರಂಗವಾದ ಅಂಶಗಳು: ದಸ್ಮಾನ್ ಡಯಾಬಿಟಿಸ್ ಇನ್ಸ್ಟಿಟ್ಯೂಟ್ನ ರೋಗನಿರೋಧಕ ಮತ್ತು ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಪ್ರಮುಖ ವಿಜ್ಞಾನಿ ಡಾ. ರಶೀದ್ ಅಹ್ಮದ್ ನೇತೃತ್ವದಲ್ಲಿ ಇಲಿಗಳ ಮೇಲೆ ಈ ಪ್ರಯೋಗವನ್ನು ನಡೆಸಲಾಗಿತ್ತು. ಸಂಶೋಧಕರು ಇಲಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಒಂದು ಗುಂಪಿಗೆ ಸಕ್ಕರೆ ಅಂಶವಿರುವ ಕಡಿಮೆ ಕೊಬ್ಬಿನ ಆಹಾರವನ್ನು ಮತ್ತು ಮತ್ತೊಂದು ಗುಂಪಿಗೆ ಸಕ್ಕರೆ ಅಂಶವೇ ಇಲ್ಲದ ಆಹಾರವನ್ನು ೧೬ ವಾರಗಳ ಕಾಲ ನೀಡಿದ್ದರು. ಸಕ್ಕರೆ ಮುಕ್ತ ಆಹಾರ ಸೇವಿಸಿದ ಇಲಿಗಳ ತೂಕದಲ್ಲಿ ಯಾವುದೇ ದೊಡ್ಡ ಬದಲಾವಣೆ ಕಂಡುಬರದಿದ್ದರೂ, ಅವುಗಳ ದೇಹದಲ್ಲಿ ಹಲವು ನಕಾರಾತ್ಮಕ ಬದಲಾವಣೆಗಳು ದಾಖಲಾಗಿವೆ. ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿದ ಇಲಿಗಳಲ್ಲಿ ರಕ್ತದ ಸಕ್ಕರೆ ನಿಯಂತ್ರಣ ತಪ್ಪಿರುವುದು, ಇನ್ಸುಲಿನ್ ಪ್ರತಿರೋಧ ಹೆಚ್ಚಾಗಿರುವುದು ಮತ್ತು ಕರುಳಿನ ಸೂಕ್ಷ್ಮಾಣುಜೀವಿಗಳ ಸಮತೋಲನ ಏರುಪೇರಾಗಿರುವುದು ಕಂಡುಬಂದಿದೆ. ಇದು ಕರುಳಿನ ಉರಿಯೂತ ಮತ್ತು ಲಿವರ್‌ಗೆ ಸಂಬಂಧಿಸಿದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಸಂಶೋಧನೆ ಹೇಳಿದೆ.
ಕರುಳಿನ ಆರೋಗ್ಯದ ಮಹತ್ವ: ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಕೋಟ್ಯಂತರ ಒಳ್ಳೆಯ ಬ್ಯಾಕ್ಟೀರಿಯಾಗಳಿರುತ್ತವೆ. ಇವು ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ಸಕ್ಕರೆಯನ್ನು ಸಂಪೂರ್ಣವಾಗಿ ಬಂದ್ ಮಾಡುವುದರಿಂದ ಈ ಒಳ್ಳೆಯ ಬ್ಯಾಕ್ಟೀರಿಯಾಗಳ ಸಮತೋಲನ ತಪ್ಪುತ್ತದೆ. ಇದರ ಪರಿಣಾಮವಾಗಿ ಕರುಳು ಮತ್ತು ಯಕೃತ್ತಿನಲ್ಲಿ (ಲಿವರ್) ಉರಿಯೂತ ಉಂಟಾಗಿ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಹಾಗಾದರೆ ಸಕ್ಕರೆ ತಿನ್ನುವುದು ಒಳ್ಳೆಯದೇ? ಅತಿಯಾದ ಸಕ್ಕರೆ ಸೇವನೆಯು ಬೊಜ್ಜು, ಟೈಪ್ ೨ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ತಜ್ಞರ ವಾದದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಅತಿಯಾದ ಸಕ್ಕರೆಯನ್ನು ಕಡಿಮೆ ಮಾಡುವುದಕ್ಕೂ ಮತ್ತು ಸಕ್ಕರೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಕ್ಕೂ ವ್ಯತ್ಯಾಸವಿದೆ. ಆಹಾರದಿಂದ ಸಕ್ಕರೆಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಬದಲು ದೇಹಕ್ಕೆ ಅಗತ್ಯವಿರುವ ಕಾರ್ಬೋಹೈಡ್ರೇಟ್‌ಗಳ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಯಾವುದೇ ಆಹಾರವನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು ಮಿತವಾಗಿ ಬಳಸುವುದೇ ಆರೋಗ್ಯಕ್ಕೆ ಉತ್ತಮ ಸೂತ್ರ ಎಂದು ಈ ಅಧ್ಯಯನ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಕೂಡ ದೈನಂದಿನ ಕ್ಯಾಲೊರಿಗಳಲ್ಲಿ ಸಕ್ಕರೆಯ ಪ್ರಮಾಣವನ್ನು ಶೇಕಡಾ ೧೦ ಕ್ಕಿಂತ ಕಡಿಮೆ ಇಟ್ಟುಕೊಳ್ಳಲು ಶಿಫಾರಸು ಮಾಡುತ್ತದೆಯೇ ಹೊರತು ಸಂಪೂರ್ಣವಾಗಿ ನಿಲ್ಲಿಸಲು ಹೇಳುವುದಿಲ್ಲ.

