ಬಾಗಲಕೋಟೆ: ರಾಜ್ಯ ಕಾಂಗ್ರೆಸ್ ಸರ್ಕಾರ ಬರಿ ಕೆಟ್ಟ ಕಾರಣಕ್ಕೆ ಮಾತ್ರ ಸುದ್ದಿಯಲ್ಲಿದೆ ಎಂದು ಬಿಜೆಪಿ ಪರಿಷತ್ ಸದಸ್ಯ ಸಿ.ಟಿ,ರವಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ.ರವಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಒಂದೇ ಒಂದು ದಿನ ಒಂದೊಳ್ಳೆ ಕಾರಣಕ್ಕೆ ಸುದ್ದಿಮಾಡಿಲ್ಲ. ಕೇವಲ ಕೆಟ್ಟ ಕಾರಣಕ್ಕೆ ಮಾತ್ರ ಸುದ್ದಿಯಲ್ಲಿದೆ. ಮೂಡಾ ಹಗರಣ, ಡ್ರಗ್ಸ್ ಕೇಸ್, ವಾಲ್ಮೀಕಿ ನಿಗಮದಲ್ಲಿ ಅಕ್ರಮ, ರೈತರ ಆತ್ಮಹತ್ಯೆ, ಸರ್ಕಾರಿ ನೌಕರ ಆತ್ಮಹತ್ಯೆ, ಇಂತಹ ವಿಚಾರಗಳಿಂದಲೇ ಸ್ದುದ್ದಿಯಲ್ಲಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಕೂಡ ಹೇಳಲಿ ಯಾವುದಾದರೂ ಒಂದು ಒಳ್ಳೆಯ ಕೆಲಸ ಅಮಡಿದ್ದೀರಾ? ಉಪಚುನಾವಣೆ ಬಂತು ಎಂದು ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಹಾಕಿದ್ದಾರೆ. ಚುನಾವಣೆ ಮುಗಿದ ಬಳಿಕ ಅದನ್ನು ಕಿತ್ತುಕೊಂಡು ಹೋಗ್ತಾರೆ ಎಂದು ಹೇಳಿದರು.
ಯುದ್ಧದ ಕಾರಣಕ್ಕೆ ಅನಿವಾರ್ಯವಾಗಿ ಕೆಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ನೀವು ಏನೂ ಇಲ್ಲದಿದ್ದರೂ ಬೆಲೆ ಏರಿಕೆ ಮಾಡಿದ್ದೀರಿ. ಅಬಕಾರಿ ಸುಂಕ, ಸ್ಟಾಂಪ್ ಪೇಪರ್, ರಜಿಸ್ಟ್ರೇಶನ್ ಶುಲ್ಕ ಹೆಚ್ಚಿಸಿದ್ದೀರಿ. ಇದೆಲ್ಲವೂ ಹಗಲು ದರೋಡೆಗೆ ಸಮವಾಗಿದೆ. ನಮ್ಮನ್ನು ಜೇಬು ಕಳ್ಳರು ಎಂದು ಹೇಳುತ್ತೀರಿ ಅಂತಾದರೆ ನೀವು ಹಗಲು ದರೋಡೆ ಕೋರರು ಎಂದು ವಾಗ್ದಾಳಿ ನಡೆಸಿದರು.
ಡ್ರಗ್ ಪೆಡ್ಲರ್ ಗಳು ರಾಜ್ಯಾದ್ಯಂತ ಹರಡಿದ್ದಾರೆ. ಅದೆಲ್ಲ ನಿಮ್ಮ ಸರ್ಕಾರದ ಕೃಪಾಕಟಾಕ್ಷ. ನಿಮ್ಮ ಸರ್ಕಾರದ ಆಶಿರ್ವಾದದಿಂದಲೇ ರಾಜ್ಯದಲ್ಲಿ ಡ್ರಗ್ಸ್ ವ್ಯವಹಾರ ನಡೆಯುತ್ತಿದೆ ಎಂದು ಗುಡುಗಿದರು.

