ಹಾವೇರಿ: ಏಷ್ಯಾದ ಅತಿ ದೊಡ್ಡ ಒಣ ಮೆಣಸಿನಕಾಯಿ ಮಾರುಕಟ್ಟೆಯಾಗಿರುವ ಬ್ಯಾಡಗಿಯ ಮಾರುಕಟ್ಟೆಗೆ ಅವಧಿಗೂ ಮೊದಲೇ ಮೆಣಸಿನಕಾಯಿ ಮಾರಾಟಕ್ಕೆ ಬಂದಿದೆ. ಹೀಗೆ ಮಾರಾಟಕ್ಕೆ ಬಂದ ಮೊದಲ ದಿನವೇ ಕ್ವಿಂಟಲ್ ಮೆಣಸಿನಕಾಯಿ 50,669 ರೂಪಾಯಿ ದರದಲ್ಲಿ ಮಾರಾಟವಾಗಿದೆ.
ಬಳ್ಳಾರಿ ಭಾಗದ ರೈತರು ನೀರಾವರಿ ಮೂಲಕ ಬೆಳೆದ 102 ಮಾದರಿಯ ತಳಿ ಮೆಣಸಿಕಾಯಿಯನ್ನು ಮಾರಾಟಕ್ಕೆ ಮಾರುಕಟ್ಟೆಗೆ ತಂದಿದ್ದಾರೆ. ಬ್ಯಾಡಗಿ ಮಾರುಕಟ್ಟೆಯ ಎರಡು ಅಂಗಡಿಗಳಲ್ಲಿ ಇನ್ನೂರಕ್ಕೂ ಅಧಿಕ ಚೀಲ ಮೆಣಸಿನ ಕಾಯಿ ಸಂಗ್ರಹ ಇದೆ. ಗುಡಗೇರಿ, ಅಣ್ಣಿಗೇರಿ, ಗದಗ, ಕುಂದಗೋಳ ಮೊದಲಾದ ಭಾಗದಲ್ಲಿ ಉತ್ತಮ ಮಳೆಯಾದಲ್ಲಿ ಬ್ಯಾಡಗಿ ಮಾರುಕಟ್ಟೆಗೆ ದಸರಾ ವೇಳೆಗೆ ಹೊಸ ಮೆಣಸಿನಕಾಯಿ ತರಲಾಗುತ್ತದೆ. ಪ್ರತಿ ವರ್ಷ ಗಣೇಶ ಹಬ್ಬದ ನಂತರ ಹೊಸ ಮೆಣಸಿನಕಾಯಿ ಬರುತ್ತದೆ. ಈಗ ನೀರಾವರಿ ಮೂಲಕ ಬೆಳೆದ ಫಸಲು ಅವಧಿಗೂ ಮೊದಲೇ ಮಾರಾಟಕ್ಕೆ ಬಂದಿದ್ದು, ಕ್ವಿಂಟಲ್ ಗೆ 50,669 ರೂಪಾಯಿ ದರದಲ್ಲಿ ಮಾರಾಟವಾಗಿದೆ.

