ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಅಲ್ಪಸಂಖ್ಯಾತ ಮುಖಂಡರು, ಸ್ವಪಕ್ಷದ ವಿರುದ್ಧವೇ ಸಿಡಿದೆದ್ದಿದ್ದು, ಸಾದಿಕ್ ಪೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಿನ್ನೆ ಕಾಂಗ್ರೆಸ್ ನಾಯಕರು ಖುದ್ದಾಗಿ ಸಾದ್ಕ್ ಪೈಲ್ವಾನ್ ಮನೆಗೆ ಬಂದು ನಾಮಪತ್ರ ಹಿಂಪಡೆಯುವಂತೆ ಮನವೊಲಿಸಲು ಮುಂದಾದರೂ ಮುಸ್ಲಿಂ ಮುಖಂಡರು ಕಾಂಗ್ರೆಸ್ ನಾಯಕರಿಗೆ ಗೋ ಬ್ಯಾಕ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಾದಿಕ್ ಪೈಲ್ವಾನ್ ತಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ. ಕಣದಿಂದ ಹಿಂದೆ ಸರಿಯಲು ಸಿಎಂ ಹೇಳಲಿ ಎಂದಿದ್ದರು.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇಂದು ಶಾಸಕ ರಿಜ್ವಾನ್ ಅರ್ಶದ್, ಸಲಿಂ ಅಹ್ಮದ್ ಮೊದಲಾದ ಕಾಂಗ್ರೆಸ್ ಮುಖಂಡರು ಸಾದಿಕ್ ಪೈಲ್ವಾನ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಸಂಧಾನಕ್ಕೆ ಕರೆತಂದಿದ್ದು, ಸಿಎಂ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿದೆ.
ಸಾದಿಕ್ ಪೈಲ್ವಾನ್ ತಮ್ಮ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿರುವ ಸಾದಿಕ್, ಕಣದಿಂದ ಹಿಂದೆ ಸರಿಯುವಂತೆ ಸಿಎಂ ಸಿದ್ದರಾಮಯ್ಯನವರೇ ಹೇಳಲಿ ಎಂದಿದ್ದರು. ಮಾತುಕತೆ ಬಳಿಕ ತಮ್ಮ ನಿರ್ಧಾರವನ್ನು ಸಂಜೆ ತಿಳಿಸುವುದಾಗಿ ಸಾಧಿಕ್ ಹೇಳಿದ್ದಾರೆ.
ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ಸಾದಿಕ್ ಪೈಲ್ವಾನ್ ಕಣದಿಂದ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

