ಬಾಗಲಕೋಟೆ: ಉಪಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಸೋಲಿನ ಭಯ ಆರಂಭವಾಗಿದೆ. ಇದೇ ಕಾರಣಕ್ಕೆ ಬಾಗಲಕೋಟೆಯಲ್ಲಿ ಪ್ರಚಾರಕ್ಕಾಗಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕರೆಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಸುಳ್ಲು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿದೆ. ಬಾಗಲಕೋಟೆಯಲ್ಲಿ ಸೋಲಿನ ಭೀತಿ ಶುರುವಾಗಿದ್ದಕ್ಕೆ ಈಗ ಯತ್ನಾಳ್ ಅವರನ್ನು ಕರೆಸಿದ್ದಾರೆ ಎಂದರು.
ಇನ್ನು 15 ದಿನ ಅಥವಾ ಒಂದು ತಿಂಗಳಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಇರುವುದಿಲ್ಲ ಎಂಬ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಸೋಮಣ್ಣ ಏನು ನಮ್ಮ ಹೈಕಮಾಂಡಾ? ಎಂದು ಪ್ರಶ್ನಿಸಿದ್ದಾರೆ. ನಮ್ಮ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ವಿ.ಸೋಮಣ್ಣ ಕೆಲಸವಿಲ್ಲದ ಮಂತ್ರಿಯಾಗಿದ್ದಾರೆ ಎಂದು ಗುಡುಗಿದರು.

