ಬ್ರಿಟನ್‌ನ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಲ್ಲಿ ಉಂಟಾದ ಸಣ್ಣ ತಾಂತ್ರಿಕ ದೋಷದಿಂದ ದೇಶಾದ್ಯಂತ ವಿಮಾನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಮಂಗಳವಾರ ಒಂದೇ ದಿನದಲ್ಲಿ ಬ್ರಿಟನ್‌ನಲ್ಲಿ ಸುಮಾರು 1,000ಕ್ಕೂ ಹೆಚ್ಚು ವಿಮಾನಗಳ ಸೇವೆ ರದ್ದಾಗಿದ್ದು, ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುವಂತಾಗಿದೆ.
ತಾಂತ್ರಿಕ ದೋಷದಿಂದ ದೇಶಾದ್ಯಂತ ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಮಂಗಳವಾರ ಒಂದೇ ದಿನದಲ್ಲಿ 1,000ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ನೂರಾರು ವಿಮಾನಗಳು ವಿಳಂಬಗೊಂಡಿವೆ. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.
ಬ್ರಿಟನ್‌ನ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಬ್ರಿಟನ್‌ನ ವಾಯುಪ್ರದೇಶ ತೆರೆದಿದ್ದರೂ, ಈ ತಾಂತ್ರಿಕ ದೋಷದಿಂದ ಅಲ್ಲಿಂದ ವಿವಿಧ ಪ್ರದೇಶಗಳಿಗೆ ತೆರಳಬೇಕಿದ್ದ ವಿಮಾನಗಳ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ. ಪರಿಣಾಮವಾಗಿ ಮಂಗಳವಾರ ಒಂದೇ ದಿನದಲ್ಲಿ ದೇಶಾದ್ಯಂತ ಸುಮಾರು 1,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ.
ವಿಷಯ ತಿಳಿಯುತ್ತಿದ್ದಂತೆ ನ್ಯಾಷನಲ್ ಏರ್ ಟ್ರಾಫಿಕ್ ಸರ್ವಿಸಸ್ (NATS) ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಫ್ಲೈಟ್ ಇನ್ಫರ್ಮೇಷನ್ ಪ್ರೊಸೆಸಿಂಗ್ ಯೂನಿಟ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದನ್ನು ಪತ್ತೆಹಚ್ಚಿದ್ದಾರೆ. ಸಾಧ್ಯವಾದಷ್ಟು ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಿ ವಿಮಾನ ಸೇವೆಗಳನ್ನು ಪುನರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ತಾಂತ್ರಿಕ ದೋಷದಿಂದ ಬ್ರಿಟನ್‌ನ ವಾಯುಪ್ರದೇಶ ತೆರೆದಿದ್ದರೂ, ಲಂಡನ್ ಹೀಥ್ರೂ, ಗ್ಯಾಟ್ವಿಕ್, ಎಡಿನ್‌ಬರ್ಗ್, ಡಬ್ಲಿನ್, ಲುಟನ್, ಬರ್ಮಿಂಗ್‌ಹ್ಯಾಮ್, ಅಬರ್ಡೀನ್ ಮತ್ತು ಗ್ಲಾಸ್ಗೋ ಸೇರಿದಂತೆ 15ಕ್ಕೂ ಹೆಚ್ಚು ಪ್ರಮುಖ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ಹೀಥ್ರೂ ವಿಮಾನ ನಿಲ್ದಾಣದಲ್ಲೇ ಸುಮಾರು 100 ವಿಮಾನಗಳು ರದ್ದಾಗಿದ್ದು, 367 ವಿಮಾನಗಳ ನಿರ್ಗಮನ ವಿಳಂಬವಾಗಿದೆ. ಗ್ಯಾಟ್ವಿಕ್ ವಿಮಾನ ನಿಲ್ದಾಣದಲ್ಲಿ ಸುಮಾರು 250 ವಿಮಾನಗಳು ವಿಳಂಬವಾಗಿ ಸಂಚರಿಸುತ್ತಿವೆ.
ವಿಮಾನಯಾನ ಸಂಸ್ಥೆಗಳ ಪೈಕಿ ಬ್ರಿಟಿಷ್ ಏರ್‌ವೇಸ್‌ನ 96 ವಿಮಾನಗಳು, ಈಜಿಜೆಟ್‌ನ 92, ಕೆಎಲ್‌ಎಂನ 20, ಲುಫ್ತಾನ್ಸಾದ 12 ಹಾಗೂ ಸ್ವಿಸ್ ಏರ್‌ಲೈನ್ಸ್‌ನ 11 ವಿಮಾನಗಳು ರದ್ದಾಗಿವೆ.
ಏರ್ ಇಂಡಿಯಾದಿಂದ ಮಹತ್ವದ ಮಾಹಿತಿ
ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕೂಡ ಮಹತ್ವದ ಮಾಹಿತಿ ನೀಡಿದೆ. ಯುಕೆ ಮೂಲಕ ಸಂಚರಿಸುವ ತನ್ನ ಹಲವು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಕೆಲವು ವಿಮಾನಗಳು ವಿಳಂಬವಾಗಿ ಸಂಚರಿಸಲಿವೆ ಎಂದು ತಿಳಿಸಿದೆ.
ವಿಮಾನಗಳು ಹಾಗೂ ಸಿಬ್ಬಂದಿ ಬೇರೆ ಬೇರೆ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವುದರಿಂದ ಮುಂದಿನ ವಿಮಾನ ಸೇವೆಗಳ ಮೇಲೂ ಪರಿಣಾಮ ಬೀರಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಇದೇ ಮೊದಲೇನಲ್ಲ
ಬ್ರಿಟನ್‌ನ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಲ್ಲಿ ಇಂತಹ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. 2023 ಮತ್ತು 2024ರಲ್ಲೂ ಇದೇ ರೀತಿಯ ಸಮಸ್ಯೆಗಳು ಎದುರಾಗಿದ್ದವು. ಇದರಿಂದ ವಿಮಾನಯಾನ ಕ್ಷೇತ್ರಕ್ಕೆ ಸುಮಾರು 100 ಮಿಲಿಯನ್ ನಷ್ಟ ಉಂಟಾಗಿತ್ತು ಎಂದು ವರದಿಯಾಗಿದೆ.
ಬ್ರಿಟಿಷ್ ಏರ್‌ವೇಸ್, ಏರ್ ಇಂಡಿಯಾ ಮೇಲೂ ಪರಿಣಾಮ
ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದ ಬ್ರಿಟಿಷ್ ಏರ್‌ವೇಸ್ 100ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದು ಅಥವಾ ಮಾರ್ಗ ಬದಲಿಸಿದೆ. ಇದರಿಂದ ಹತ್ತಾರು ಸಾವಿರ ಪ್ರಯಾಣಿಕರಿಗೆ ತೊಂದರೆಯಾಗಿದೆ. ಮತ್ತೊಂದೆಡೆ, ರಯಾನ್ಏರ್‌ನ 65,000ಕ್ಕೂ ಹೆಚ್ಚು ಪ್ರಯಾಣಿಕರು ವ್ಯತ್ಯಯಕ್ಕೆ ಒಳಗಾಗಿದ್ದು, 50ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.ಫ್ಲೈಟ್‌ರಾಡಾರ್24 ಪ್ರಕಾರ, ಲಂಡನ್‌ನಲ್ಲಿ ಬುಧವಾರ ಇದುವರೆಗೆ 177 ವಿಮಾನಗಳು ರದ್ದಾಗಿವೆ.
ಏರ್ ಇಂಡಿಯಾ ಕೂಡ ಈ ತಾಂತ್ರಿಕ ದೋಷದಿಂದ ತನ್ನ ಕೆಲವು ವಿಮಾನ ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ಘಟನೆಯ ಬಳಿಕ ವಿಮಾನಗಳು ಮತ್ತು ಸಿಬ್ಬಂದಿ ಬೇರೆ ಬೇರೆ ಸ್ಥಳಗಳಲ್ಲಿ ಸಿಲುಕಿಕೊಂಡಿರುವುದರಿಂದ ಮುಂದಿನ ಸೇವೆಗಳ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸುವಂತೆ ಏರ್ ಇಂಡಿಯಾ ಸಲಹೆ ನೀಡಿದೆ.ಇನ್ನು ಈಜಿಜೆಟ್‌ನ 218, ಕೆಎಲ್‌ಎಂನ 37, ಯೂರೋವಿಂಗ್ಸ್‌ನ 22 ಹಾಗೂ ರಯಾನ್ಏರ್‌ನ 41 ವಿಮಾನಗಳು ರದ್ದಾಗಿವೆ.
ಆರ್ಸೆನಲ್ ತಂಡದ ವಿಮಾನವೂ ವಿಳಂಬ
ಏರ್ ಟ್ರಾಫಿಕ್ ಕಂಟ್ರೋಲ್ ವ್ಯತ್ಯಯದ ಪರಿಣಾಮ ಆರ್ಸೆನಲ್ ಫುಟ್‌ಬಾಲ್ ತಂಡ ಕೂಡ ತೊಂದರೆ ಅನುಭವಿಸಿದೆ. ಬುಧವಾರ ನಾಪೋಲಿಯ ವಿರುದ್ಧ ನಡೆಯಲಿರುವ ಚಾಂಪಿಯನ್ಸ್ ಲೀಗ್ ಪಂದ್ಯಕ್ಕಾಗಿ ತಂಡ ನಾಪೋಲಿಗೆ ತೆರಳಬೇಕಿತ್ತು. ಆದರೆ ವಿಮಾನ ವಿಳಂಬವಾದ ಹಿನ್ನೆಲೆಯಲ್ಲಿ ತಂಡ ನಿಗದಿಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಬೇಕಾಯಿತು.
ಬ್ರಿಟನ್‌ನ ವಿಮಾನಯಾನ ಮೂಲಸೌಕರ್ಯಕ್ಕೆ ಮತ್ತೆ ಪ್ರಶ್ನೆ
ಈ ಘಟನೆಯ ಬೆನ್ನಲ್ಲೇ ಬ್ರಿಟನ್‌ನ ವಿಮಾನಯಾನ ಮೂಲಸೌಕರ್ಯದ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಕಳೆದ ವರ್ಷದ ಜುಲೈನಲ್ಲಿ ರೇಡಾರ್‌ಗೆ ಸಂಬಂಧಿಸಿದ ತಾಂತ್ರಿಕ ದೋಷದಿಂದ ಬ್ರಿಟನ್‌ನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
2023ರಲ್ಲಿ ಬ್ರಿಟನ್‌ನ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಲ್ಲಿ ಇದಕ್ಕಿಂತಲೂ ದೊಡ್ಡ ವೈಫಲ್ಯ ಸಂಭವಿಸಿತ್ತು. ಸ್ವಯಂಚಾಲಿತ ವಿಮಾನ ಯೋಜನೆ ಸಂಸ್ಕರಣಾ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದ ನೂರಾರು ವಿಮಾನಗಳು ರದ್ದಾಗಿದ್ದು, ಹಲವು ವಿಮಾನಗಳು ವಿಳಂಬಗೊಂಡಿದ್ದವು. ಇದರಿಂದ 7 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆಗೊಳಗಾಗಿದ್ದರು.
NATS ಮುಖ್ಯಸ್ಥರನ್ನು ವಜಾಗೊಳಿಸುವಂತೆ ಒತ್ತಾಯ
ಇತ್ತೀಚಿನ ತಾಂತ್ರಿಕ ವೈಫಲ್ಯದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ರಯಾನ್ಏರ್‌ನ ಸಿಒಒ ನೀಲ್ ಮೆಕ್‌ಮಹಾನ್, NATS ಮುಖ್ಯ ಕಾರ್ಯನಿರ್ವಾಹಕ ಮಾರ್ಟಿನ್ ರೋಲ್ಫ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ವಿಜ್ ಏರ್ ಕೂಡ ಏರ್ ಟ್ರಾಫಿಕ್ ಕಂಟ್ರೋಲ್ ಸೇವೆ ಒದಗಿಸುವ ಸಂಸ್ಥೆಯಲ್ಲಿ ತುರ್ತು ಸುಧಾರಣೆಗಳ ಅಗತ್ಯವಿದೆ ಎಂದು ಹೇಳಿದೆ.
“ಇನ್ನು ಸಾಕು. ಬ್ರಿಟನ್ ಸರ್ಕಾರ ಮಧ್ಯಪ್ರವೇಶಿಸುವ ಸಮಯ ಬಂದಿದೆ. ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬಲ್ಲವರನ್ನು ಜವಾಬ್ದಾರಿಯ ಸ್ಥಾನಕ್ಕೆ ತರಬೇಕು” ಎಂದು ಮೆಕ್‌ಮಹಾನ್ ಹೇಳಿದ್ದಾರೆ.
ವಿಮಾನಗಳ ವಿಳಂಬದಿಂದ ರಯಾನ್ಏರ್‌ನ ಸುಮಾರು 1.5 ಲಕ್ಷ ಪ್ರಯಾಣಿಕರು ಬಾಧಿತರಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಅಲ್ಲದೆ, 200ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಬೇಕಾಯಿತು ಎಂದು ಹೇಳಿದೆ.
ಪುನರಾವರ್ತಿತ ವೈಫಲ್ಯಗಳಿಗೆ NATS ಮುಖ್ಯಸ್ಥ ಮಾರ್ಟಿನ್ ರೋಲ್ಫ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕೆಂದು ಮೆಕ್‌ಮಹಾನ್ ಪ್ರಶ್ನಿಸಿದ್ದಾರೆ.
ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ: NATS
ಬ್ರಿಟನ್‌ನ ಸಾರಿಗೆ ಸಚಿವೆ ಹೈಡಿ ಅಲೆಕ್ಸಾಂಡರ್, ಘಟನೆಯ ಕುರಿತು ತನಿಖೆ ನಡೆಸುವಂತೆ ಹಾಗೂ ದೇಶದ ವಿಮಾನಯಾನ ಜಾಲವನ್ನು ಬೆಂಬಲಿಸುವ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
NATS ಮುಖ್ಯ ಕಾರ್ಯನಿರ್ವಾಹಕ ಮಾರ್ಟಿನ್ ರೋಲ್ಫ್ ಮಾತನಾಡಿ, ಇತ್ತೀಚಿನ ವೈಫಲ್ಯಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ.“ನಿಖರವಾಗಿ ಏನು ತಪ್ಪಾಗಿದೆ ಎಂಬುದು ಇನ್ನೂ ನಮಗೆ ತಿಳಿದಿಲ್ಲ” ಎಂದು ರೋಲ್ಫ್ ತಿಳಿಸಿದ್ದಾರೆ.
ಬ್ರಿಟನ್‌ನ ಸಿವಿಲ್ ಏವಿಯೇಷನ್ ಅಥಾರಿಟಿ, NATSನಿಂದ ಘಟನೆಯ ಕುರಿತು ಸಂಪೂರ್ಣ ವರದಿ ಪಡೆಯುವ ನಿರೀಕ್ಷೆಯಲ್ಲಿದೆ. ವರದಿ ಪರಿಶೀಲಿಸಿದ ಬಳಿಕ ದೇಶದ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಮತ್ತಷ್ಟು ಕ್ರಮಗಳ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದೆ.

