ಕಾರವಾರ: ಮದುವೆಯ ದಿನವೇ ವಧು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ.
ಶಿರಸಿ ನಗರದ ನಿವಾಸಿ ಸೀಫಾ ಖಾನ್ ನಾಪತ್ತೆಯಾಗಿರುವ ಯುವತಿ. ಇಂದು ಸಿಫಾ ಖಾನ್ ಅವರ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಸಿಫಾ ನಾಪತ್ತೆಯಾಗಿದ್ದಾಳೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಆತಂಕ ಶುರುವಾಗಿದೆ.
ಎಂಬಿಬಿಎಸ್ ಓದುತ್ತಿದ್ದ ಯುವಕನೊಂದಿಗೆ ಯುವತಿ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಶಿರಸಿಯ ಹೊಸ ಮಾರುಕಟ್ಟೆ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.
ಇಂದು ಮಧ್ಯಾಹ್ನ ಶಿರಸಿಯ ಉಸರಿ ರಸ್ತೆಯ ಕಲ್ಯಾಣ ಮಂಟಪದಲ್ಲಿ ಸೀಫಾ ಖಾನ್ ಮದುವೆ ನಿಗದಿಯಾಗಿತ್ತು. ಮದುವೆಯ ಸಿದ್ಧತೆಗಳಲ್ಲಿ ಕುಟುಂಬಸ್ಥರೆಲ್ಲರೂ ತೊಡಗಿದ್ದರು. ಆದರೆ, ವಧುವನ್ನು ಸಜ್ಜುಗೊಳಿಸಲು ಆಕೆಯ ಕೋಣೆಗೆ ಹೋಗಿ ನೋಡಿದಾಗ ವಧಿ ಸಿಫಾ ಅಲ್ಲಿ ಇರಲಿಲ್ಲ. ಮನೆಯವರು ಸುತ್ತಮುತ್ತ ಹಾಗೂ ಪರಿಚಿತರ ಮನೆಗಳಲ್ಲಿ ಎಷ್ಟೇ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ.
ಸಿಫಾ ಎಂಬಿಬಿಎಸ್ ಓದುತ್ತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಯುವತಿ ಮನೆಯವರು ಮದುವೆಗೆ ಒಪ್ಪದೇ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಿಯಿಸಿದ್ದರು. ಇದೇ ಕಾರಣಕ್ಕಾಗಿ ಯುವತಿ ಪ್ರೀತಿಸಿದ ಯುವಕನೊಂದಿಗೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

