ತುಮಕೂರು: ವಿದೇಶಿ ಭಯೋತ್ಪಾದಕನ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ತುಮಕೂರಿನಲ್ಲಿ ಓರ್ವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ಶ್ರೀರಾಮನಗರ ನಿವಾಸಿ ಅಲ್ಲಾಬಕ್ಷ್(24) ಬಂಧಿತ ಆರೋಪಿ. ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಶಂಕಿತನನ್ನು ಬಂಧಿಸಲಾಗಿದೆ. ಆರೋಪಿ ಅಲ್ಲಾಬಪಕ್ಷ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಶಂಕಿತ ಉಗ್ರ ಸಂಘಟನೆಯ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿರುವ ಮಾಹಿತಿ ಗೊತ್ತಾಗಿದೆ. ಎಕ್ಸ್ ಖಾತೆಯ ಮೂಲಕ ವಿದೇಶಿ ವ್ಯಕ್ತಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ. ದೇಶದ ಭದ್ರತೆಗೆ ಧಕ್ಕೆ ಬರುವ ರೀತಿ ಚಾಟ್ ನಡೆಸಿರುವ ಆರೋಪಿ ದೇಶದ ಆಂಜನೇಯ ಬೆಳವಣಿಗೆ ಕುರಿತು ಪ್ರಚೋದನಾತ್ಮಕ ಸಂದೇಶ ರವಾನೆ ಮಾಡಿದ್ದಾನೆ. ಯುವಕನ ನಡೆಯ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳು ನಿಗಾ ವಹಿಸಿದ್ದವು.
ಈ ಬಗ್ಗೆ ಪೊಲೀಸರಿಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ಮಾಹಿತಿ ನೀಡಲಾಗಿತ್ತು. ಕೇಂದ್ರ ತನಿಖಾ ಸಂಸ್ಥೆಗಳ ಮಾಹಿತಿಯ ಮೇರೆಗೆ ಅಲ್ಲಾಬಕ್ಷ್ ನನ್ನು ಬಂಧಿಸಲಾಗಿದೆ. ಬಂಧಿತ ಯುವಕನ ಜೊತೆ ಸಂಪರ್ಕದಲ್ಲಿರುವ ಮತ್ತೋರ್ವ ವ್ಯಕ್ತಿಗಾಗಿ ತುಮಕೂರು ಪೊಲೀಸರು ಬಲೆ ಬೀಸಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

