ರಾಯಚೂರು: ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡವೊಂದರಲ್ಲಿ 20 ಕೋಳಿಗಳು ಹಾಗೂ 10 ಮೇಕೆಗಳು ಸಜೀವ ದಹನವಾಗಿರುವ ಘಟನೆ ನಡೆದಿದೆ.
ರಾಯಚೂರು ತಾಲೂಕಿನ ಬುರ್ದಿಪಾಡ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗ್ರಾಮದ ನಿವಾಸಿ ನಾಗಮ್ಮ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ನಾಗಮ್ಮ ಅವರು ಎಂದಿನಂತೆ ತಮ್ಮ ಕುರಿ, ಮೇಕೆ ಹಾಗೂ ಕೋಳಿಗಳನ್ನು ಶೆಡ್ ನಲ್ಲಿ ಹಾಕಿದ್ದರು. ಆದರೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕೊಟ್ಟಿಗೆಯಲ್ಲಿದ್ದ 20 ಕೋಳಿಗಳು ಮತ್ತು 10 ಮೇಕೆಗಳು ಹೊರಬರಲಾಗದೆ ಸ್ಥಳದಲ್ಲೇ ಸಜೀವ ದಹನವಾಗಿವೆ.
ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಜಾನುವಾರುಗಳು ಸಾವನ್ನಪ್ಪಿದ್ದು, ಬಡ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಕದ ಜಮೀನಿನ ಕಸದ ರಾಶಿಗೆ ಹಾಕಲಾಗಿದ್ದ ಬೆಂಕಿಯ ಕಿಡಿ ತಗುಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಣ್ಣೆದುರೇ ತಮ್ಮ ಮೂಕಪ್ರಾಣಿಗಳು ಬೆಂಕಿಗೆ ಆಹುತಿಯಾಗಿರುವುದನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯರು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

