ಬೆಂಗಳೂರು: ನನ್ನನ್ನು ವಜಾ ಮಾಡಿರುವುದರ ಹಿಂದೆ ಒಂದು ಷಡ್ಯಂತ್ರವಿದೆ. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರ, ಪಿತೂರಿ ಇದೆ. ಯಾರ್ಯಾರು ಏನೇನು ಮಾಡಿದ್ದಾರೆ ಎಂದು ಕಾಲ ಬಂದಾಗ ನಾನು ಎಲ್ಲವನ್ನು ಹೇಳುತ್ತೇನೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ತಪ್ಪು ಗ್ರಹಿಕೆಯಾಗಿರಬಹುದು, ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡ್ತೇನೆ ಎಂದು ಸಂಪುಟದಿಂದ ವಜಾಗೊಂಡ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್. ರಾಜಣ್ಣ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿಮ್ಮ ಮುಂದೆ ಈಗ ಮಾಜಿ ಸಚಿವನಾಗಿ ಮಾತನಾಡಲು ಬಂದಿದ್ದೇನೆ. ಸನ್ಮಾನ್ಯ ಸಿದ್ದರಾಮಯ್ಯ ಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈಗಿನ ಬೆಳವಣಿಗೆ ಬಗ್ಗೆ ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡ್ತೇನೆ ರಾಜಣ್ಣ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷದ ವರಿಷ್ಠರಿಗೆ ತಪ್ಪು ಗ್ರಹಿಕೆಯಾಗಿರಬಹುದು. ಅದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ. ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರು. ಮತಗಳ್ಳತನ ಬಗ್ಗೆ ಅವರು ಹೋರಾಟ ನಡೆಸುತ್ತಿದ್ದು, ಅವರಿಗೆ ನಮ್ಮೆಲ್ಲರ ಬೆಂಬಲ ಇದೆ. ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲಾ ಅವರಿಗೆ ತಪ್ಪು ಗ್ರಹಿಕೆಯಾಗಿರಬಹುದು. ಅದನ್ನು ತಿಳಿಸಲು ದೆಹಲಿಗೆ ಹೋಗಿ ಭೇಟಿ ಮಾಡುತ್ತೇನೆ. ನನ್ನೊಂದಿಗೆ ಕೆಲವು ಸಚಿವರು, ಶಾಸಕರು ಬರುತ್ತಾರೆ. ತಪ್ಪು ಗ್ರಹಿಕೆ ನಿವಾರಿಸುವ ಪ್ರಯತ್ನ ಮಾಡುತ್ತೇನೆ. ನಾವು ಏನೇ ಮಾತನಾಡಿದರೂ ಅಂತಿಮವಾಗಿ ಹೈಕಮಾಂಡ್ ಮತ್ತು ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ. ಇದು ಪಕ್ಷದ ನಿರ್ಧಾರವಾಗಿದೆ. ನಾನು ಪ್ರಶ್ನೆ ಮಾಡುವುದಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.