ಬೆಂಗಳೂರು: ಬೆಂಗಳೂರಿನಲ್ಲಿ ವಿಶ್ವವಿಖ್ಯಾತ ಕರಗ ಮಹೋತ್ಸವ ನಡೆದಿದ್ದು, ಅಪಾರ ಸಂಖ್ಯೆಯ ಜನ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಂಡಿದ್ದಾರೆ.
ಬೆಂಗಳೂರಿನ ಸಾಂಸ್ಕೃತಿಕ ವೈಭವ ಪ್ರತಿಬಿಂಬಿಸುವ ಐತಿಹಾಸಿಕ ಕರಗ ಶಕ್ತ್ಯೋತ್ಸವ ವೈಭವವನ್ನು ಚೈತ್ರ ಪೂರ್ಣಿಮೆಯಂದು ಬೆಳದಿಂಗಳ ಬೆಳಕಿನಲ್ಲಿ ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ. ಮಲ್ಲಿಗೆ ಹೂವುಗಳಿಂದ ಸಿಂಗರಿಸಲಾಗದ ಹೂವಿನ ಕರಗವನ್ನು ಹೊತ್ತು ವಹ್ನಿಕುಲ ಸಮುದಾಯದ ಎ. ಜ್ಞಾನೇಂದ್ರ ಹೆಜ್ಜೆ ಹಾಕಿದ್ದಾರೆ. ಕರಗದ ಅಕ್ಕಪಕ್ಕದಲ್ಲಿ ವೀರಕುಮಾರರು ಭದ್ರತೆ ಒದಗಿಸಿದ್ದಾರೆ. ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಿಂದಲೂ ಆಗಮಿಸಿದ್ದ ಭಕ್ತರು ವೈಭವದ ಕರಗ ಕಣ್ತುಂಬಿಕೊಂಡಿದ್ದಾರೆ.
ತಿಗಳರ ಪೇಟೆಯ ಶ್ರೀ ಧರ್ಮದಾಯ ಸ್ವಾಮಿ ದೇವಾಲಯದಿಂದ ಹೊರಟ ಕರಗ ಗಣಪತಿ, ಮುತ್ಯಾಲಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಹಲಸೂರು ಪೇಟೆಯ ಆಂಜನೇಯ ಸ್ವಾಮಿ, ಪ್ರಸನ್ನ ಗಂಗಾಧರೇಶ್ವರ ಸ್ವಾಮಿ, ನಗರ್ತರಪೇಟೆಯ ವೇಣುಗೋಪಾಲ ಕೃಷ್ಣಸ್ವಾಮಿ ದೇವಾಲಯ, ಕಬ್ಬನ್ ಪಾರ್ಕ್ ನಲ್ಲಿ ಮೆರವಣಿಗೆ ನಡೆಸಿ ಗಾಣಿಗರಪೇಟೆಯ ದೇವಾಲಯ, ಈಶ್ವರ ದೇವಾಲಯ, ಗಾಂಧಿನಗರದ ಅಣ್ಣಮ್ಮ ದೇವಾಲಯ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ ನ ಆಂಜನೇಯ ದೇವಾಲಯಗಳಿಗೆ ಕರಗ ತೆರಳಿತು.
ಗೊಲ್ಲರಪೇಟೆ ತಿಗಳರಪೇಟೆಗಳಲ್ಲಿ ತಿಗಳ ಕುಲಬಾಂಧವರ ಮನೆಗಳಲ್ಲಿ ಮತ್ತು ಭಕ್ತರಿಂದ ಪೂಜೆ ಸ್ವೀಕರಿಸಲಾಯಿತು. ಇಂದು ಬೆಳಿಗ್ಗೆ ದ್ರೌಪದಿ ದೇವಿಯ ಕರಗ ವಾಪಸ್ ಶ್ರೀಧರ್ಮರಾಯಸ್ವಾಮಿ ದೇವಾಲಯ ತಲುಪಿತು.
ದೇವಾಲಯ ಸೇರಿದಂತೆ ಸುತ್ತಮುತ್ತ ಕರಗ ಸಾಗುವ ಮಾರ್ಗಗಳಲ್ಲಿ ವಾಹನಗಳ ಸಂಚಾರ ಬದಲಾಯಿಸಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

