ರಷ್ಯಾದ ದೂರ ಪೂರ್ವದ ಅಮೂರ್ ಪ್ರದೇಶದಲ್ಲಿರುವ ಗ್ಯಾಸ್-ಕೆಮಿಕಲ್ ಕಾಂಪ್ಲೆಕ್ಸ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಚೀನಾ ಪ್ರಜೆಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದು, 152 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಒಂಬತ್ತು ಮಂದಿ ನಾಪತ್ತೆಯಾಗಿದ್ದು, ಘಟನೆಯ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ.
ರಷ್ಯಾದ ದೂರ ಪೂರ್ವದಲ್ಲಿರುವ ಅಮೂರ್ ಪ್ರದೇಶದ ಗ್ಯಾಸ್-ಕೆಮಿಕಲ್ ಕಾಂಪ್ಲೆಕ್ಸ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಆರು ಮಂದಿ ಚೀನಾ ಪ್ರಜೆಗಳು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದು, ಇನ್ನೂ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ಅಮೂರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್‌ನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು, ಇದೀಗ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ಪ್ಲಾಂಟ್ ಬುಧವಾರ ಟೆಲಿಗ್ರಾಂ ಮೂಲಕ ತಿಳಿಸಿದೆ.
ರಾಯಿಟರ್ಸ್ ವರದಿ ಪ್ರಕಾರ, ಘಟನೆಯಲ್ಲಿ ಒಟ್ಟು ಏಳು ಮಂದಿ ಮೃತಪಟ್ಟಿದ್ದು, 152 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ 36 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಷ್ಯಾದ ತನಿಖಾ ಸಮಿತಿ ತನಿಖೆ ಆರಂಭಿಸಿದೆ. ಕೈಗಾರಿಕಾ ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ.
ಈ ಗ್ಯಾಸ್ ಪ್ಲಾಂಟ್ ನಿರ್ಮಾಣ ಕಾಮಗಾರಿಯಲ್ಲಿ ಚೀನಾ ಸೇರಿದಂತೆ ಹಲವು ದೇಶಗಳ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. ರಷ್ಯಾದಲ್ಲಿ ಪ್ರಮುಖ ಕೈಗಾರಿಕಾ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅಮೂರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್‌ನ್ನು ವಿಶ್ವದ ಅತಿದೊಡ್ಡ ಪಾಲಿಥಿಲೀನ್ ಮತ್ತು ಪಾಲಿಪ್ರೊಪಿಲೀನ್ ಉತ್ಪಾದನಾ ಘಟಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಘಟಕವು ವಾರ್ಷಿಕವಾಗಿ ಸುಮಾರು 23 ಲಕ್ಷ ಮೆಟ್ರಿಕ್ ಟನ್ ಪಾಲಿಥಿಲೀನ್ ಹಾಗೂ 4 ಲಕ್ಷ ಟನ್ ಪಾಲಿಪ್ರೊಪಿಲೀನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ರಷ್ಯಾದ ದೂರ ಪೂರ್ವ ಅಮೂರ್ ಪ್ರದೇಶದಲ್ಲಿ ಸಿಬೂರ್ ಮತ್ತು ಸಿನೋಪೆಕ್ ಸಹಯೋಗದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ಯಾಸ್ ಪ್ಲಾಂಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದ ನಿಖರ ಕಾರಣವನ್ನು ರಷ್ಯಾದ ತನಿಖಾ ಸಮಿತಿಯ ತನಿಖೆ ಪೂರ್ಣಗೊಂಡ ಬಳಿಕವೇ ಖಚಿತಪಡಿಸಲಾಗುವುದು.

