ಬೆಂಗಳೂರು: ಇಷ್ಟದ ಕೋರ್ಸ್ ಮತ್ತು ಕಾಲೇಜು ನೀಡುತ್ತಿಲ್ಲವೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಚೇರಿ ಎದುರು ಪೋಷಕರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬಗ್ಗೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ.
ಕೌನ್ಸೆಲಿಂಗ್ ನಲ್ಲಿ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಸೀಟುಗಳನ್ನು ಹಂಚಿಕೆ ಮಾಡಿದ್ದೇವೆ. ಪ್ರಾದಿಕಾರದ ಕಚೇರಿ ಮುಂದೆ ಗೊಂದಲ ಸೃಷ್ಟಿ ಮಾಡುತ್ತಿರುವುದು ಕೇವಲ 200 ಜನ. ಕಳೆದ ಶೈಕ್ಷಣಿಕ ವರ್ಷದಲ್ಲಿ ಸೀಟು ಬ್ಲಾಕಿಂಗ್ ಹಗರಣ ಬೆಳಕಿಗೆ ಬಂದಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೂ ಅದೇ ರೀತಿ ಮಾಡಲು ಕುತಂತ್ರ ನಡೆಸಿದ್ದರು. 12ನೇ ಸುತ್ತು ಪೂರ್ಣಗೊಳಿಸಿ ಮೂರನೇ ಸುತ್ತಿನಲ್ಲಿ ಸೀಟು ಬೇಡವೆಂದರೆ ಹೇಗೆ? ಇದನ್ನೇ ಸೀಟ್ ಬ್ಲಾಕಿಂಗ್ ಎಂದು ಕರೆಯಬಹುದು ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಹೊರಗೆ ನಿಂತು ಹಲವರು ಸೀಟು ಬ್ಲಾಕಿಂಗ್ ಮಾಡಿದ್ದರು. ನಾವು ದೂರು ನೀಡಿದ ನಂತರ ಹಲವರ ಬಂಧನವಾಗಿತ್ತು. ರಾಜ್ಯಾದ್ಯಂತ ಹಲವು ಕಾಲೇಜುಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿತ್ತು. ಕೌನ್ಸೆಲಿಂಗ್ ನಲ್ಲಿ ಭಾಗಿಯಾಗಿದ್ದ ಮಕ್ಕಳು, ಪೋಷಕರಿಗೆ ನಿಯಮ ತಿಳಿದಿದೆ. ಕೌನ್ಸೆಲಿಂಗ್ ನ ಒಂದು, ಎರಡನೇ ಸುತ್ತಿನಲ್ಲಿ ಸೀಟು ಬೇಡವೆಂದು ಹೇಳಲು ಅವಕಾಶವಿತ್ತು. ಆದರೆ ಮೂರನೇ ಸುತ್ತಿನಲ್ಲಿ ಆಯ್ಕೆ ಮಾಡಿಕೊಂಡ ಕಾಲೇಜು ಬೇಡವೆಂದರೆ ತಪ್ಪು. ಇಷ್ಟವಿಲ್ಲವೆಂದು ಮೊದಲೇ ಹೇಳಿದ್ದರೆ ಮತ್ತೊಬ್ಬರಿಗೆ ಅನುಕೂಲವಾಗುತ್ತಿತ್ತು. ಅವರಿಗೆ ಅನ್ಯಾಯ ಮಾಡಿ ಈಗ ಕೊಟ್ಟಿರುವ ಸೀಟು ಬೇಡವೆಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಮೂರನೇ ಸುತ್ತಿನಲ್ಲಿ ಸಿಕ್ಕ ಸೀಟು ಆಯಾ ಕಾಲೇಜ್ ಮ್ಯಾನೇಜ್ಮೆಂಟ್ ಗೆ ಹೋಗುತ್ತದೆ. ಆಗ ಅವರು ಇಷ್ಟ ಬಂದವರಿಗೆ ಇಷ್ಟ ಬಂದ ರೇಟ್ ಗೆ ಸೀಟು ಮಾಡಿಕೊಳ್ಳುತ್ತಾರೆ. ಇದನ್ನೇ ಸೀಟ್ ಬ್ಲಾಕಿಂಗ್ ಎಂದು ಕರೆಯಲಾಗುತ್ತದೆ ಎಂದು ಪ್ರಸನ್ನ ಹೇಳಿದ್ದಾರೆ.
ಪ್ರಾಧಿಕಾರದ ವಿರುದ್ಧ ಯಾರು ಯಾರು ಪ್ರತಿಭಟನೆ ಮಾಡಿದ್ದಾರೆ ಎಂದು ಪರಿಶೀಲಿಸುತ್ತೇವೆ. ಸೀಟು ಬ್ಲಾಕಿಂಗ್ ಮಾಡಲು ಪ್ರಯತ್ನಿಸಿದವರನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.