ರಾಜ್ಯದ ವಿವಿಧೆಡೆ ಭಾರೀ ಗಾಳಿ, ಮಳೆಯಾಗಿದ್ದು, ಸಿಡಿಲು ಬಡಿದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 50 ಕುರಿಗಳು ಕೂಡ ಸಿಡಿಲಿಗೆ ಬಲಿಯಾದ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬೆಂಚಮಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ದೇವರಾಯನಗೌಡ ಪೊಲೀಸ್ ಪಾಟೀಲ(50) ಮೃತಪಟ್ಟವರು ಎಂದು ಹೇಳಲಾಗಿದೆ. ಹೊಲದಲ್ಲಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುರಿಗಳು ಸಾವು
ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಬೊದೂರು ಬಳಿ ಸಿಡಿಲು ಬಡಿದು 50 ಕುರಿಗಳು ಮೃತಪಟ್ಟಿವೆ. ಕುರಿಗಾಹಿಗಳಾದ ಮಲ್ಲಪ್ಪ, ಜಾಲಪ್ಪ, ಹನುಮಂತ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಕುರಿಗಳನ್ನು ಮೇಯಿಸಲು ಕಾಡಿಗೆ ಹೋದಾಗ ಸಿಡಿಲು ಬಡಿದಿದೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಉರುಳಿಬಿದ್ದ ಮೊಬೈಲ್ ಟವರ್
ಭಾರೀ ಗಾಳಿಗೆ ಮನೆಯ ಮೇಲಿದ್ದ ಮೊಬೈಲ್ ಟವರ್ ಧರೆಗೆ ಉರುಳಿ ಬಿದ್ದ ಘಟನೆ ಗದಗ ಜಿಲ್ಲೆ ಮುಂಡರಗಿಯ ಜಾಗೃತ ಸರ್ಕಲ್ ಬಳಿ ನಡೆದಿದೆ. ಭಾರಿ ಗಾಳಿಯಿಂದ ಮೊಬೈಲ್ ಟವರ್ ಬಿದ್ದು ಬೈಕ್ ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಮೊಬೈಲ್ ಟವರ್ ಅಳವಡಿಕೆಗೆ ಕಂಪನಿಗೆ ಅವಕಾಶ ನೀಡಿದ್ದಕ್ಕೆ ಸಾರ್ವಜನಿಕರು ಮುಂಡರಗಿ ಪುರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

