ಬೆಂಗಳೂರು: ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಋತುಚಕ್ರದ ರಜೆ ನೀಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಶಾ ಮಾಹಿತಿ ನೀಡಿದ್ದಾರೆ.
ಜನವರಿ 1ರಿಂದ ಮಹಿಳಾ ಕಂಡಕ್ಟರ್, ಚಾಲಕರು, ಮಹಿಳಾ ಸಿಬ್ಬಂದಿ ಋತುಚಕ್ರದ ರಜೆ ಪಡೆಯಬಹುದು.
ಕರ್ನಾಟಕ ಸರ್ಕಾರ ಉಲ್ಲೇಖಿತ ಸರ್ಕಾರದ ಆದೇಶಗಳಲ್ಲಿ ಮಹಿಳಾ ನೌಕರರ ಮನೋಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಸೌಲಭ್ಯವನ್ನು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಕಲ್ಪಿಸಿ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ರಜೆ ಮಂಜೂರು ಮಾಡಲು ಆದೇಶಿಸಿದೆ.
ಸದರಿ ಆದೇಶವನ್ನು ಸಾರಿಗೆ ನಿಗಮದಲ್ಲಿ ಅಳವಡಿಸಿಕೊಂಡಿದ್ದು, ಅದರಂತೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಜನವರಿ 1ರಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಸೌಲಭ್ಯವನ್ನು ಷರತ್ತಿಗೆ ಒಳಪಟ್ಟು ಮಂಜೂರು ಮಾಡಲು ಸೂಚಿಸಲಾಗಿದೆ.
ಋತುಚಕ್ರ ಹೊಂದಿರುವ ನಿಗಮದ ಮಹಿಳಾ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮ ಪ್ರಾಧಿಕಾರಿಯು ಋತುಚಕ್ರ ರಜೆ ಮಂಜೂರು ಮಾಡಬಹುದು.
ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಒದಗಿಸುವ ಅಗತ್ಯವಿಲ್ಲ.
ರಜೆ ಮಂಜೂರಾತಿ ಪುಸ್ತಕದಲ್ಲಿ ಈ ರಜೆಯನ್ನು ಪ್ರತ್ಯೇಕವಾಗಿ ನಮೂದಿಸತಕ್ಕದ್ದು.
ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸತಕ್ಕದ್ದಲ್ಲ.
ಸದರಿ ರಜೆಯನ್ನು ಆಯಾ ತಿಂಗಳಲ್ಲಿಯೇ ಬಳಸಿಕೊಳ್ಳುವುದು, ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.

