ಬೆಂಗಳೂರು: ಬೆಂಗಳೂರಿನ ಶಿವಾಜಿನಗರದಲ್ಲಿ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಸವರಾಜ ಪಡುಕೋಟೆ ಸೇರಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಪ್ರಮುಖ ಆರೋಪಿ ಬಸವರಾಜ ಪಡುಕೋಟೆಯನ್ನು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಜಿಬಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ಫುಟ್ಪಾತ್ ಒತ್ತುವರಿ ತೆರವು ನಡೆಸುವಾಗ ಬಸವರಾಜ ಪಡುಕೋಟೆ ಮತ್ತು ಆತನ ಬೆಂಬಲಿಗರು ಹಾಗೂ ಕೆಲವು ವ್ಯಾಪಾರಿಗಳು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೋಲೀಸರು ಕಾರ್ಯಾಚರಣೆ ನಡೆಸಿ ಬಸವರಾಜ ಪಡುಕೋಟೆ ಬಂಧಿಸಿದ್ದು, ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಹಲ್ಲೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಬಿಎ ನೌಕರರು, ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದು, ಕರ್ತವ್ಯನಿರತ ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಹೇಳಿದ್ದು, ಬುಧವಾರವೂ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಪ್ರಮುಖ ಆರೋಪಿ ಬಸವರಾಜ ಪಡಕೋಟೆ ಹಾಗೂ ಕಿರಣ್, ಬಸವರಾಜ್, ರಂಜಿತ್, ರಂಗಸ್ವಾಮಿ, ಮುಜಾಹಿದ್ ಅಹಮದ್, ಕೊಟ್ರೇಶ್, ಪರಶುರಾಮ್ ಸೇರಿದಂತೆ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

