ಬಾಗಲಕೋಟೆ: ಕಾಂಗ್ರೆಸ್ ಪಕ್ಷದ 50 ಶಾಸಕರನ್ನು ಡಿ.ಕೆ. ಶಿವಕುಮಾರ್ ಬಿಜೆಪಿಗೆ ಕರೆ ತಂದರೂ ಒಪ್ಪುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ಅದಕ್ಕೆ ನಾವು ಕೂಡ ಒಪ್ಪುವುದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್, ವಿಜಯೇಂದ್ರ ಒಪ್ಪಂದ ಮಾಡಿಕೊಂಡಿದ್ದಾರೆ. ಮೊನ್ನೆ ಅಮಿತ್ ಶಾ ಅವರನ್ನು ಭೇಟಿಯಾಗಿ ಬೆಂಬಲ ಬೇಕು ಎಂದು ಕೇಳಿದ್ದಾರೆ. ಆದರೆ, ಪ್ರಲ್ಹಾದ್ ಜೋಶಿಯವರ ಹೇಳಿಕೆಯನ್ನು ನೋಡಿದರೆ ಡಿ.ಕೆ. ನೇತೃತ್ವದ ಸರ್ಕಾರದಲ್ಲಿ ಬಿಜೆಪಿ ಭಾಗಿಯಾಗುವುದಿಲ್ಲ. ಈ ಬಗ್ಗೆ ಸ್ಪಷ್ಟ ಸಂದೇಶವನ್ನು ಬಿಜೆಪಿ ಹೈಕಮಾಂಡ್ ಕೊಟ್ಟಿದೆ. ಆದರೂ ವಿಜಯೇಂದ್ರ ಹಠಕ್ಕೆ ಬಿದ್ದು ಏನಾದರೂ ಮಾಡಿ ಡಿಕೆ ಮುಖ್ಯಮಂತ್ರಿ ಮಾಡಿ, ತಾನು ಉಪಮುಖ್ಯಮಂತ್ರಿಯಾಗಬೇಕು ಎಂದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಆದರೆ ರಾಜ್ಯವನ್ನು ಸಂಪೂರ್ಣವಾಗಿ ತಿಂದು ಹಾಕಿಬಿಡುತ್ತಾರೆ ಅಷ್ಟೇ. ಇದಕ್ಕೆ ಬಹುತೇಕ ಬಿಜೆಪಿಯ ಶಾಸಕರಿಗೆ ಒಪ್ಪಿಗೆ ಇಲ್ಲ ಎಂದು ಬಾಗಲಕೋಟೆ ಜಿಲ್ಲೆ ಇಳಕಲ್ ನಲ್ಲಿ ಯತ್ನಾಳ್ ಹೇಳಿದ್ದಾರೆ.
