ಮಡಿಕೇರಿ: ಮಹತ್ವದ ಕಾರ್ಯಾಚರಣೆ ನಡೆಸಿರುವ ಕೊಡಗು ಜಿಲ್ಲಾ ಪೊಲೀಸರು ಕೇರಳ ರಾಜ್ಯದಿಂದ ಅಕ್ರಮವಾಗಿ ಕಾರ್ ನಲ್ಲಿ ಸಾಗಿಸುತ್ತಿದ್ದ 10 ಕೋಟಿ ರೂಪಾಯಿ ಮೌಲ್ಯದ 10 ಕೆಜಿ 390 ಗ್ರಾಂ ಅಂಬರ್ ಗ್ರೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯ ವೇಳೆ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ 9 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 10 ಕೋಟಿ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್, ಎರಡು ನೋಟು ಎಣಿಕೆ ಯಂತ್ರಗಳು ಮತ್ತು ಎರಡು ಕಾರ್ ವಶಕ್ಕೆ ಪಡೆಯಲಾಗಿದೆ.
ತಿರುವನಂತಪುರಂನಿಂದ ಅಕ್ರಮವಾಗಿ ತಿಮಿಂಗಿಲದ ವಾಂತಿ ಮಾರಾಟ ಮಾಡುವ ಸಲುವಾಗಿ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕೇರಳದ ಶಂಸುದ್ದೀನ್, ನವಾಜ್, ಲತೀಶ್, ರಿಜೇಶ್, ಪ್ರಶಾಂತ್ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ರಾಘವೇಂದ್ರ, ಕಾಸರಗೋಡಿನ ಬಾಲಚಂದ್ರ ನಾಯಕ್, ಕಲ್ಲಿಕೋಟೆಯ ಸಂಜು ಥಾಮಸ್, ಕಣ್ಣುರಿನ ಜೊಬಿನ್ ಅವರನ್ನು ಬಂಧಿಸಲಾಗಿದೆ.