ಬೆಂಗಳೂರು: ನಿಧಿ ಆಸೆಗಾಗಿ ಮಗು ಬಲಿಕೊಡಲು ದತ್ತು ಪೋಷಕರು ಯತ್ನ ನಡೆಸಿದ ಆರೋಪ ಕೇಳಿ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ.
ಮನೆಯಲ್ಲೇ ಗುಂಡಿ ತೆಗೆದು ಮಗುವನ್ನು ಬಲಿ ಕೊಡಲು ಪೂಜೆ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಮನೆಯ ಮೇಲೆ ದಾಳಿ ಮಾಡಿ ಎಂಟು ತಿಂಗಳ ಗಂಡು ಮಗುವನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಸೈಯದ್ ಇಮ್ರಾನ್ ಎಂಬುವರ ಮನೆಯಲ್ಲಿ ನಿಧಿಗಾಗಿ ಮಗು ಬಲಿ ಪೂಜೆ ನಡೆಸಲಾಗುತ್ತಿತ್ತು. ಇವರು ಬೇರೆಯವರಿಂದ ಗಂಡು ಮಗುವನ್ನು ಖರೀದಿಸಿದ್ದರು. ಹುಣ್ಣಿಮೆ ಹಿನ್ನೆಲೆ ಮಗುವನ್ನು ಬಲಿ ಕೊಡುತ್ತಿದ್ದಾರೆ ಎಂದು ಅಪರಿಚಿತರು ಕರೆ ಮಾಡಿದ್ದರು.
ಸಹಾಯವಾಣಿಗೆ ಕರೆ ಬಂದ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದ್ದಾರೆ. ಮನೆಯ ಕೋಣೆಯಲ್ಲಿ ಗುಂಡಿ ತೆಗೆದು ಪೂಜೆ ಮಾಡಿದ್ದು ಪತ್ತೆಯಾಗಿದೆ. ಮಗುವನ್ನು ಶಿಶು ಕೇಂದ್ರಕ್ಕೆ ರವಾನಿಸಿ ಮಕ್ಕಳ ಕಲ್ಯಾಣ ಸಮಿತಿಯಿಂದ ಬಲಿ ಪೂಜೆ ಆರೋಪದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

