ಬೆಂಗಳೂರು: ವರ ನಟ ಡಾ. ರಾಜ್ ಕುಮಾರ್ ಸಮಾಧಿ ವಿಚಾರವಾಗಿ ಹೇಳಿಕೆ ನೀಡಿದ್ದ ನಟ ಚೇತನ್ ಅಹಿಂಸಾ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ಡಾ. ರಾಜಕುಮಾರ್ ಅಭಿಮಾನಿಗಳು ಸಾ.ರಾ. ಗೋವಿಂದು, ಶಿವರಾಮೇಗೌಡರ ನೇತೃತ್ವದಲ್ಲಿ ಚೇತನ್ ಮನೆಗೆ ಮುತ್ತಿಗೆ ಹಾಕಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಿ ಚೇತನ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಚೇತನ್ ಕೂಡ ಆಕ್ಷೇಪಿಸಿದ್ದು, ರಾಜ್ ಅಭಿಮಾನಿಗಳಿಂದ ತೀವ್ರ ವಿರೋಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ನಾನು ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶದಿಂದ ಹೇಳಿಕೆ ನೀಡಿಲ್ಲ. ರಾಜ್ ಕುಮಾರ್ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ ಎಂದು ನಟ ಚೇತನ್ ಅಹಿಂಸಾ ತಿಳಿಸಿದ್ದಾರೆ.
ಇಲ್ಲಿ ಯಾರಿಗೂ ನೋವು ಮಾಡುವ ಉದ್ದೇಶ ನನ್ನದಲ್ಲ ನಾನು ರಾಜ್ ಕುಮಾರ್ ಕೊಡುಗೆಯನ್ನು ಅಲ್ಲಗಳೆಯುವುದಿಲ್ಲ. ನಾನು ಹಾಕಿದ್ದ ಪೋಸ್ಟ್ ನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ರಾಜ್ ಕುಮಾರ್ ಅಭಿಮಾನಿಗಳ ಎದುರು ಕ್ಷಮೆಯಾಚಿಸಿದ್ದಾರೆ.
ಡಾ.ರಾಜ್ ಕುಮಾರ್ ಸಮಾಧಿಗೆ ಸರ್ಕಾರ 2.5 ಎಕರೆ ಜಾಗ ನೀಡಿದ್ದಕ್ಕೆ ನಟ ಚೇತನ್ ಅಹಿಂಸಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. 2.5 ಎಕರೆ ಜಾಗ ನೀಡಿದ್ದು ತಿಳಿವಳಿಕೆಯ ನಿರ್ಧಾರವಾಗಿತ್ತಾ? 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರ ಸಾರ್ವಜನಿಕರ ಉಪಯೋಗಕ್ಕೆ ಭೂಮಿ ಹಂಚಬೇಕು ಮತಗಳ ಉದ್ದೇಶದಿಂದ ಹಂಚಬಾರದು ಎಂದು ಪೋಸ್ಟ್ ಹಾಕಿದ್ದರು. ಇದಕ್ಕೆ ನಟ ಚೇತನ್ ಅಹಿಂಸಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿ ಡಾ.ರಾಜ್ ಕುಮಾರ್ ಅಭಿಮಾನಿಗಳು ಬಸವೇಶ್ವರನಗರ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

