ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಸದ್ದು ಮಾಡಿದ್ದು, ಹಲವು ಅನಧಿಕೃತ ಮನೆ, ಕಟ್ಟಡಗಳು ನೆಲಸಮವಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡನಾಗಮಂಗಲದಲ್ಲಿ ಕಾರ್ಯಾಚರಣೆ ನಡೆದಿದೆ. ಪೊಲೀಸ್ ಭದ್ರತೆ ನಡುವೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಕಟ್ಟಡ ನೆಲಸಮ ಮಾಡಿದ್ದಕ್ಕೆ ನಿವಾಸಿಗಳು ಕಣ್ಣೀರಿಟ್ಟಿದ್ದಾರೆ.
ಸರ್ವೆ ನಂಬರ್ 54 ರಲ್ಲಿರುವ ರಾಯಸಂದ್ರ ಕೆರೆ ಜಾಗ ಒಟ್ಟು 52 ಎಕರೆ ವಿಸ್ತೀರ್ಣ ಹೊಂದಿದೆ. 4.22 ಎಕರೆ ಕೆರೆ ಜಾಗ ಒತ್ತುವರಿ ಮಾಡಿ ಲೇಔಟ್ ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲಾಗಿತ್ತು. ನಕಲಿ ದಾಖಲೆ ಸೃಷ್ಟಿಸಿ ಲೇಔಟ್ ನಿರ್ಮಿಸಿ ಜಾಗ ಮಾರಾಟ ಮಾಡಲಾಗಿತ್ತು. ಇಲ್ಲಿ ನೂರಾರು ಮಂದಿ ಮನೆ ಕಟ್ಟಿಕೊಂಡಿದ್ದರು. ಇದೀಗ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ರಾಮರೆಡ್ಡಿ & ಗ್ಯಾಂಗ್ ಅಕ್ರಮವಾಗಿ ಲೇಔಟ್ ನಿರ್ಮಿಸಿ ಬಡವರಿಗೆ ಮಾರಿದ್ದರು. ಇಲ್ಲಿ ಸುಮಾರು 100 ಕ್ಕೂ ಹೆಚ್ಚು ಮಂದಿ ವಾಸವಿದ್ದರು. ಆದರೆ ರಾಮರೆಡ್ಡಿ ಮಾಡಿದ ಕೆಲಸಕ್ಕೆ ಬಡವರು ಬೀದಿಗೆ ಬಿದ್ದಿದ್ದಾರೆ.