ಜೈಪುರ: ಉದ್ಯಮಿಯೊಬ್ಬರ 8 ವರ್ಷದ ಮಗನನ್ನು ಕಿಡ್ನ್ಯಾಪ್ ಮಾಡಿರುವ ದುಷ್ಕರ್ಮಿಗಳು 80 ಲಕ್ಷ ಹಣಕ್ಕೆ ಬೇದಿಕೆ ಇಟ್ಟು ಬಾಲಕನನ್ನು ಕೊಂದು ಹಾಕಿರುವ ಘಟನೆ ನಡೆದಿದೆ.
ಬಾಲಕನನ್ನು ಹತ್ಯೆಗೈದು ರಾಜಸ್ಥಾನದ ಮಾನಿಯಾ ಗ್ರಾಮದಲ್ಲಿ ಶವವನ್ನು ಹೂತು ಹಾಕಿದ್ದಾರೆ. ಅಭಯ್ ಕೊಲೆಯಾದ ಬಾಲಕ. ಉತ್ತರ ಪ್ರದೇಶ ಮೂಲದ ಸಾರಿಗೆ ಸಂಸ್ಥೆಯ ಮಾಲೀಕ ವಿಜಯ್ ಪ್ರತಾಪ್ ಅವರ ಪುತ್ರ.
ಆಗ್ರಾದ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ಅಭಯ್ ನನ್ನು ಕಿಡ್ನ್ಯಾಪ್ ಮಾಡಿದ್ದ ದುಷ್ಕರ್ಮಿಗಳ ತಂಡ ಕೆಲ ದಿನಗಳ ಹಿಂದೆ ಬಾಲಕನ ಮನೆಗೆ ಪತ್ರದ ಮೂಲಕ ನಿಮ್ಮ ಮಗನನ್ನು ಅಪಹರಿಸಿದ್ದೇವೆ. ಬಿಡುಗಡೆಗೆ 80 ಲಕ್ಷ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಬಾಲಕನ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಬಾಲಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಬಾಲಕನ ಪತ್ತೆಯಾಗಿರಲಿಲ್ಲ. ಈಗ ರಾಜಸ್ಥಾನದಲ್ಲಿ ಬಾಲಕನ ಶವ ಪತ್ತೆಯಾಗಿದೆ. ಮಾನಿಯಾ ಗ್ರಾಮದಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಾಲಕನನ್ನು ಹತ್ಯೆಗೈದು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವುದಾಗಿ ಸಹಾಯಕ ಪೊಲೀಸ್ ಕಮಿಷನರ್ ಅಮರದೀಪ್ ಲಾಲ್ ತಿಳಿಸಿದ್ದಾರೆ.