HomeLatest Newsಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ: ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ಮುಂದಾದ ಬಿಜೆಪಿ ನಾಯಕರು

ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ: ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ಮುಂದಾದ ಬಿಜೆಪಿ ನಾಯಕರು

ಬೆಂಗಳೂರು: ವಿಧಾನ ಪರಿಷತ್​​ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನವಾಗಿರುವ ಹಿನ್ನೆಲೆಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ಬಿಜೆಪಿ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ಮುಂದಾಗಿದೆ.

ದೇವರ ಮೇಲೆ ಆಣೆ ಪ್ರಮಾಣ ಮಾಡಿಸಲು ರಾಜ್ಯ ಬಿಜೆಪಿ ಮುಂದಾದ್ದು, ಧರ್ಮಸ್ಥಳದಲ್ಲಿ ಬಿಜೆಪಿ‌ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ. ಮುಂದಿನ ವಾರ ಸಭೆ ನಡೆಯಲಿದ್ದು, ಸಭೆಯಲ್ಲಿ ಅಡ್ಡ ಮತದಾನದ ಬಗ್ಗೆ ಶಾಸಕರಿಂದ ಆಣೆ ಮಾಡಿ ಮಾಹಿತಿ ಸಂಗ್ರಹ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪರಿಷತ್ ಚುನಾವಣೆಯಲ್ಲಿ‌ ನಮ್ಮಿಂದ 4 ಅಡ್ಡ ಮತದಾನ ಆಗಿದೆ ಎಂಬ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ನಮ್ಮ ಕಾರ್ಯಕರ್ತರು, ಶಾಸಕರ ನಡವಳಿಕೆ ಬಗ್ಗೆ ಬೇಸರ ಪಟ್ಟಿದ್ದಾರೆ. ಹೀಗಾಗಿ ನನ್ನನ್ನು ಸೇರಿ ಎಲ್ಲ 63 ಶಾಸಕರ ಮೇಲೂ ಅನುಮಾನ ಪಡುವಂತಾಗಿದೆ. ನಿನ್ನೆ ನಿತಿನ್ ನಬಿನ್ ಅವರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ದೆಹಲಿಗೆ ನಾನು ಹಾಗೂ ಆರ್. ಅಶೋಕ್ ಅವರು ಹೋಗುತ್ತಿದ್ದು, ಈ ವಾರದಲ್ಲೇ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಅಶೋಕ್ ಅವರ ಜತೆ ಚರ್ಚೆ ಮಾಡುತ್ತೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಯಿಗೆ ದ್ರೋಹ ಮಾಡಿದ ಶಾಸಕರು ಯಾರೆಂದು ಶ್ರೀಕ್ಷೇತ್ರದಲ್ಲೇ ಗೊತ್ತಾಗಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಎಲ್ಲವೂ ಧರ್ಮಸ್ಥಳದಲ್ಲಿ ತೀರ್ಮಾನವಾಗಲಿದೆ ಎಂದು ಹೇಳಿದರು. ಒಬ್ಬರಿಗೆ 50ರಿಂದ 100 ಕೋಟಿ ಆಮಿಷವೊಡ್ಡಿದ್ದಾರೆ. ಹಾಗಾಗಿಯೇ ಅಡ್ಡಮತದಾನವಾಗಿದೆ ಎಂದು ಕಿಡಿಕಾರಿದರು.

ಪರಿಷತ್​​ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​​ನಿಂದ ಒಟ್ಟು 11 ಮತಗಳು ಕ್ರಾಸ್​​ ವೋಟಿಂಗ್​​ ಆಗಿತ್ತು. ಹೀಗಾಗಿ ಜೆಡಿಎಸ್​​ ಅಭ್ಯರ್ಥಿ ಸೋಲುಂಡಿದ್ದರೆ, ಬಿಜೆಪಿಯ ಎರಡು ಅಭ್ಯರ್ಥಿಗಳ ಪೈಕಿ ಓರ್ವ ಅಭ್ಯರ್ಥಿ ಪ್ರಯಾಸದಲ್ಲಿ ಗೆಲುವು ಪಡೆದಿದ್ದರು. ಓರ್ವ ಅಭ್ಯರ್ಥಿಗೆ 30 ಮತಗಳು ಎಂದು ಕೊನೇ ಕ್ಷಣದಲ್ಲಿ ರಾಜ್ಯ ಬಿಜೆಪಿಯ ನಾಯಕರು ನಿರ್ಧರಿಸಿದ್ದ ಪರಿಣಾಮ ಚುನಾವಣೆಯಲ್ಲಿ ಭಾರೀ ಮುಖಭಂಗ ಬಿಜೆಪಿಗೆ ತಪ್ಪಿತ್ತು. ಹೀಗಾಗಿ ಪಕ್ಷಕ್ಕೆ ದ್ರೋಹ ಬಗೆದ ಶಾಸಕರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular