HomeKarnatakaದಾವಣಗೆರೆ ದಕ್ಷಿಣ: ಎಂದೂ ಗೆಲ್ಲದ ಕ್ಷೇತ್ರದಲ್ಲಿ ಉಪಚುನಾವಣೆ ಗೆಲುವಿಗೆ ಬಿಜೆಪಿ ತಂತ್ರ!

ದಾವಣಗೆರೆ ದಕ್ಷಿಣ: ಎಂದೂ ಗೆಲ್ಲದ ಕ್ಷೇತ್ರದಲ್ಲಿ ಉಪಚುನಾವಣೆ ಗೆಲುವಿಗೆ ಬಿಜೆಪಿ ತಂತ್ರ!

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಬೇಕಿದೆ. ಕ್ಷೇತ್ರದ ಶಾಸಕರಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ಈಗ ಉಪಚುನಾವಣೆ ನಡೆಯಬೇಕಿದೆ. ಈ ಉಪಚುನಾವಣೆ ಗೆಲ್ಲಬೇಕು ಎಂದು ಬಿಜೆಪಿ ತಂತ್ರ ರೂಪಿಸುತ್ತಿದೆ.

ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದರು. 2008 ರಿಂದ 2013ರ ತನಕ 4 ಚುನಾವಣೆಯಲ್ಲಿಯೂ ಅವರು ಜಯಗಳಿಸಿದ್ದರು. ಆದರೆ ಅವರ ಅನುಪಸ್ಥಿತಿಯಲ್ಲಿ ನಡೆಯಲಿರುವ ಉಪ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

ಶಾಮನೂರು ಶಿವಶಂಕರಪ್ಪ ಕುಟುಂಬ ದಾವಣಗೆರೆಯಲ್ಲಿ ಭಾರೀ ಪ್ರಭಾವ ಹೊಂದಿದೆ. ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಸಚಿವರು, ಶಾಮನೂರು ಶಿವಶಂಕರಪ್ಪ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಂಸದರು. ಆದರೆ ದಾವಣಗೆರೆ ದಕ್ಷಿಣದ ಉಪಚುನಾವಣೆ ಟಿಕೆಟ್ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಸಿಗಲಿದೆಯೇ? ಎಂಬುದು ಪ್ರಶ್ನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾವಣಗೆರೆ ದಕ್ಷಿಣದ ಫಲಿತಾಂಶ

  • 2008ರಲ್ಲಿ ರಚನೆಯಾದ ಕ್ಷೇತ್ರದಲ್ಲಿ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ 41,675 ಮತಗಳನ್ನು ಪಡೆದು ಗೆದ್ದರು. ಬಿಜೆಪಿಯ ಯಶವಂತರಾವ್ ಜಾಧವ್ 35,317 ಮತ ಮತ್ತು ಜೆಡಿಎಸ್‌ನ ಹೆಚ್.ಎಸ್.ನಾಗರಾಜ್ 19,163 ಮತಗಳನ್ನು ಪಡೆದು ಸೋತರು.
  • 2013ರಲ್ಲಿ ಶಾಮನೂರು ಶಿವಶಂಕರಪ್ಪ 66,320 ಮತಗಳನ್ನು ಪಡೆದು ಗೆದ್ದರು. ಜೆಡಿಎಸ್‌ನ ಕೆರೆಕಟ್ಟೆ ಸೈಯದ್ ಸೈಫುಲ್ಲಾ 26,162 ಮತ ಮತ್ತು ಬಿಜೆಪಿಯ ಬಿ.ಲೋಕೇಶ್ 21,282 ಮತಗಳನ್ನು ಪಡೆದು ಸೋತರು.
  • 2018ರಲ್ಲಿ ಶಾಮನೂರು ಶಿವಶಂಕರಪ್ಪ 71,369 ಮತಗಳನ್ನು ಪಡೆದು ಗೆದ್ದರು. ಬಿಜೆಪಿಯ ಯಶವಂತರಾವ್ ಜಾಧವ್ 55,485 ಮತ ಮತ್ತು ಜೆಡಿಎಸ್‌ನ ಜೆ.ಅಮಾನುಲ್ಲಾ ಖಾನ್ 6,020 ಮತ ಪಡೆದು ಸೋಲು ಕಂಡರು.
  • 2023ರಲ್ಲಿ ಶಾಮನೂರು ಶಿವಶಂಕರಪ್ಪ 84,298 ಮತಗಳನ್ನು ಪಡೆದು ಗೆದ್ದರು. ಬಿಜೆಪಿಯ ಅಜಯ್ ಕುಮಾರ ಬಿ.ಜಿ. 56,410 ಮತ್ತು ಜೆಡಿಎಸ್‌ನ ಅಮಾನುಲ್ಲಾ ಖಾನ್ ಜೆ. 1,296 ಮತ ಪಡೆದು ಸೋತರು.

ಬಿಜೆಪಿಯ ತಂತ್ರ: ಬಿಜೆಪಿ ದಾವಣಗೆರೆ ದಕ್ಷಿಣದಲ್ಲಿ 4 ಚುನಾವಣೆಗಳಲ್ಲೂ ಗೆದ್ದಿಲ್ಲ. ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ. ಆದರೆ ಕ್ಷೇತ್ರ ಪಕ್ಷಕ್ಕೆ ಒಲಿದಿಲ್ಲ. ಆದ್ದರಿಂದ ಈಗ ಉಪ ಚುನಾವಣೆ ಗೆಲ್ಲಬೇಕು ಎಂದು ಪಕ್ಷ ತಂತ್ರವನ್ನು ರೂಪಿಸುತ್ತಿದೆ.

ಒಂದು ವೇಳೆ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಗೆಲುವು ಕಷ್ಟ. ಒಂದು ವೇಳೆ ಬೇರೆಯವರಿಗೆ ಟಿಕೆಟ್ ಸಿಕ್ಕಿದರೆ ಬಿಜೆಪಿ-ಜೆಡಿಎಸ್ ಒಂದಾಗಿ ಗೆಲ್ಲುವುದು ಸಾಧ್ಯವಿದೆ ಎಂಬುದು ಸ್ಥಳೀಯ ಜನರ ಅಭಿಪ್ರಾಯ.

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ದಾವಣಗೆರೆ ದಕ್ಷಿಣ ಬಿಜೆಪಿಗೆ ಸಿಗುವ ನಿರೀಕ್ಷೆ ಇದೆ. ಜೆಡಿಎಸ್‌ ಕ್ಷೇತ್ರದಲ್ಲಿ ಅಂತಹ ಪ್ರಭಾವ ಹೊಂದಿಲ್ಲ. 26,162 ಪಕ್ಷ ಕ್ಷೇತ್ರದಲ್ಲಿ ಇದುವರೆಗೂ ಗಳಿಸಿದ ಅತಿ ಹೆಚ್ಚು ಮತವಾಗಿದೆ.

ಬಿಜೆಪಿ ಈ ಬಾರಿ ಮತ್ತೆ ಅಭ್ಯರ್ಥಿ ಬದಲಾವಣೆ ಮಾಡಲಿದೆಯೇ? ಅಥವ ಕಳೆದ ಚುನಾವಣೆಯಲ್ಲಿ ಸೋಲು ಕಂಡವರನ್ನು ಪುನಃ ಕಣಕ್ಕಿಳಿಸಲಿದೆಯೇ? ಕಾದು ನೋಡಬೇಕಿದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಎರಡು ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, “ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಅಧ್ಯಕ್ಷರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದು ನೂರಕ್ಕೆ ನೂರು ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ” ಎಂದು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್ ದಾವಣಗೆರೆಯಲ್ಲಿ ಸೋಲು ಕಂಡಿದ್ದಾರೆ. ಶಾಮನೂರು ಶಿವಶಂಕರಪ್ಪ ಸೊಸೆ ವಿರುದ್ಧ ಕಂಡಿರುವ ಸೋಲಿನ ಸೇಡನ್ನು ಈ ಉಪ ಚುನಾವಣೆ ಗೆಲ್ಲುವ ಮೂಲಕ ತೀರಿಸಿಕೊಳ್ಳುವ ಹಂಬಲದಲ್ಲಿದೆ ಬಿಜೆಪಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular