ಬೆಂಗಳೂರು: ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಟನಲ್ ರಸ್ತೆಯಿಂದ ಸ್ಯಾಂಕಿ ಕೆರೆಗೆ ತೊಂದರೆಯಾಗಲಿದೆ. ಇದರಿಂದ ಸ್ಯಾಂಕಿ ಕೆರೆ ಸುತ್ತಮುತ್ತಲ ಪರಿಸರ ನಾಶವಾಗಲಿದೆ ಎಂದು ಕಿಡಿಕಾರಿರುವ ಬಿಜೆಪಿ ನಾಯಕರು, ಸ್ಯಾಂಕಿ ಕೆರೆ ಉಳಿಸಿ ಅಭಿಯಾನ ಆರಂಭಸಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ನಿಯೋಗ ಇಂದು ಬೆಂಗಳೂರಿನ ಸ್ಯಾಂಕಿ ಕೆರೆ ಹಾಗೂ ಸುತ್ತಮುತ್ತಲ ಪರಿಸರ ಪರ್ಶೀಲನೆ ನಡೆಸಿ ಸ್ಯಾಂಕಿ ಕೆರೆ ಉಳಿಸಿ; ಬೆಂಗಳುರು ರಕ್ಷಿಸಿ ಅಭಿಯಾನದ ಭಾಗವಾಗಿ ಸಹಿಸಂಗ್ರಹ ಕಾರ್ಯಕ್ರಮ ನಡೆಸಿತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.
ಸ್ಯಾಂಕಿ ಕೆರೆ ಬಳಿ ಟನಲ್ ರಸ್ತೆ ಎಕ್ಸಿಟ್ ನಿರ್ಮಾಣ ಮಾಡಲು ಸರ್ಕಾರ ಹೊರಟಿದೆ. ಸ್ಯಾಂಕಿ ಕೆರೆ ಬಳಿ ಟನಲ್ ಎಕ್ಸಿಟ್ ನಿರ್ಮಿಸಿದರೆ ಇದರಿಂದ ಕೆರೆಗೆ ಮಾತ್ರವಲ್ಲ ಈ ಭಾಗದ ಪರಿಸರಕ್ಕೂ ಹಾನಿಯಾಗುತ್ತದೆ. ಹಾಗಾಗಿ ಇಲ್ಲಿ ಟನಲ್ ಎಕ್ಸಿಟ್ ನಿರ್ಮಿಸಬಾರದು ಎಂದು ಆರ್.ಅಶೋಕ್ ಆಗ್ರಹಿಸಿದರು.
ಸರ್ಕಾರ ಬೆಂಗಳೂರು ಅಭಿವೃದ್ಧಿ ಹೆಸರಲ್ಲಿ ಲಾಲ್ ಬಾಗ್, ಸ್ಯಾಂಕಿ ಕೆರೆ, ಉದ್ಯಾನವನಗಳನ್ನು ನಾಶ ಮಾಡಲು ಹೊರಟಿದೆ. ನಾವು ಸುರಂಗ ಮಾರ್ಗದ ವಿರೋಧಿಗಳಲ್ಲ. ಆದರೆ ಬೆಂಗಳೂರಿನಲ್ಲಿರುವ ಉದ್ಯಾನವನಗಳು, ಇರುವ ಅಲ್ಪಸ್ವಲ್ಪ ಉತ್ತಮ ಪರಿಸರವಿರುವ ಜಾಗಗಳಲ್ಲಿ ಟನಲ್ ನಿರ್ಮಿಸುವ ಯೋಜನೆ ಸರಿಯಲ್ಲ. ತಕ್ಷಣ ಇಂತಹ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
