HomeKarnatakaದೇಶ ನಿರ್ಮಾಣ ಕ್ರಿಯೆಯಲ್ಲಿ ಬಿಜೆಪಿ,RSS ಪಾತ್ರ ಏನೇನೂ ಇಲ್ಲ : ಸಿಎಂ ಸಿದ್ದರಾಮಯ್ಯ

ದೇಶ ನಿರ್ಮಾಣ ಕ್ರಿಯೆಯಲ್ಲಿ ಬಿಜೆಪಿ,RSS ಪಾತ್ರ ಏನೇನೂ ಇಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ದೇಶ ನಿರ್ಮಾಣ ಕ್ರಿಯೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಪಾತ್ರ ಏನೇನೂ ಇಲ್ಲ. ಕೇವಲ ಭಾಷಣಗಳಿಂದ ದೇಶ ನಿರ್ಮಾಣ ಸಾಧ್ಯವಿಲ್ಲ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ. ಸಿಎಂ ಸಿದ್ದರಾಮಯ್ಯ, ಭಾರತೀಯರನ್ನು 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ವಿಧಾನಸೌಧದ ಕನಸು ಕಾಣಲೂ ಅಶಕ್ತರಾಗಿದ್ದ ಜಾತಿಗಳು ಗೆದ್ದು ವಿಧಾನಸಭೆ ಪ್ರವೇಶಿಸುವಂತೆ ಮಾಡಿದ ದೇವರಾಜ ಅರಸರು ಪ್ರಜಾತಂತ್ರದ ರೂವಾರಿಗಳು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೂರದೃಷ್ಟಿಯ ನಾಯಕ ರಾಜೀವ್ ಗಾಂಧಿ ಮತದಾನದ ವಯಸ್ಸನ್ನು 18 ವರ್ಷಕ್ಕೆ ಇಳಿಸಿದರು. ಆ ಮೂಲಕ ಯುವ ಸಮೂಹ ದೇಶದ ಭವಿಷ್ಯ ರೂಪಿಸುವಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಮಹಾನ್ ಜವಾಬ್ದಾರಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ಎಂದು ಹೇಳಿದ್ದಾರೆ.

ದೇಶದ ಎಲ್ಲಾ ರಂಗಗಳಲ್ಲೂ ಯುವ ಸಮೂಹ ಮತ್ತು ಎಲ್ಲಾ ಜಾತಿ, ಜನ ವರ್ಗಗಳ ಪ್ರತಿನಿಧಿಗಳು ಪಾಲ್ಗೊಳ್ಳುವಿಕೆಯ ಮಹಾದ್ವಾರವನ್ನು ತೆರೆದವರು ರಾಜೀವ್ ಗಾಂಧಿ. ಇದಕ್ಕಾಗಿ ಅಧಿಕಾರ ವಿಕೇಂದ್ರೀಕರಣ ಜಾರಿ ಮಾಡಿದರು. ಸಂವಿಧಾನಕ್ಕೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತಂದರು. ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ಅವಕಾಶವನ್ನು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ವಿಸ್ತರಿಸಿದವರು ರಾಜೀವ್ ಗಾಂಧಿ. ಇಂದು ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರೆಲ್ಲರೂ ರಾಜೀವ್ ಗಾಂಧಿ ಅವರನ್ನು ಸ್ಮರಿಸಬೇಕು. ಶೇ.50 ಮಹಿಳಾ ಮೀಸಲಾತಿ ಸಾಧ್ಯ ಆಗಿದ್ದು ರಾಜೀವ್ ಗಾಂಧಿ ಅವರಿಂದ ಎನ್ನುವುದನ್ನು ದೇಶದ ಪ್ರತಿಯೊಬ್ಬ ಮಹಿಳೆಯರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಮಾಹಿತಿ ತಂತ್ರಜ್ಞಾನ ಮತ್ತು ಇಂಟರ್ ನೆಟ್ ವ್ಯವಸ್ಥೆಯಲ್ಲಿ ಭಾರತದಲ್ಲಿ ಕ್ರಾಂತಿ ಮಾಡಿದವರು ರಾಜೀವ್ ಗಾಂಧಿಯವರು. ಅವರು ಭವ್ಯ ಭಾರತ ನಿರ್ಮಾಣದ ಮತ್ತು ಸಾಮಾಜಿಕ ನ್ಯಾಯದ ಸಮ ಸಮಾಜವನ್ನು ರೂಪಿಸುವ ಮಹಾನ್ ಕನಸು ಮತ್ತು ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದರು. ಅವೆಲ್ಲಾ ಜಾರಿ ಮಾಡುತ್ತಿದ್ದ ಹೊತ್ತಲ್ಲೇ ಹುತಾತ್ಮರಾಗಿ ಈ ನೆಲದ ಮಣ್ಣಿನಲ್ಲಿ ತ್ಯಾಗಮಯಿಯಾಗಿ ದಾಖಲಾದರು ಎಂದು ಹೇಳಿದರು.

ದೇಶಕ್ಕಾಗಿ, ದೇಶದ ಸಮಗ್ರತೆಗಾಗಿ ಹೋರಾಟ ಮಾಡಿದ, ತ್ಯಾಗ ಮಾಡಿದ, ಹುತಾತ್ಮರಾದ ಇತಿಹಾಸ, ಚರಿತ್ರೆ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಈ ಯಾವ ಚರಿತ್ರೆ ಮತ್ತು ಇತಿಹಾಸ ಬಿಜೆಪಿಗೂ ಇಲ್ಲ, ಸಂಘ ಪರಿವಾರಕ್ಕೂ ಇಲ್ಲ. ಕೇವಲ ಭರ್ಜರಿ ಭಾಷಣ ಮಾಡುವುದರಲ್ಲಿ ಮಾತ್ರ ಬಿಜೆಪಿ ಪರಿವಾರದವರು ನಿಸ್ಸೀಮರು. ದೇಶ ನಿರ್ಮಾಣ ಕ್ರಿಯೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಪಾತ್ರ ಏನೇನೂ ಇಲ್ಲ. ಕೇವಲ ಭಾಷಣಗಳಿಂದ ದೇಶ ನಿರ್ಮಾಣ ಸಾಧ್ಯವಿಲ್ಲ.

ದೇವರಾಜ ಅರಸು ಅವರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಛಲ ಇತ್ತು. ಹೀಗಾಗಿ ಮಲ ಹೊರುವ ಪದ್ಧತಿ ನಿಲ್ಲಿಸಿದರು. ಜೀತ ವ್ಯವಸ್ಥೆಗೆ ಮುಕ್ತಿ ಹಾಡಿದರು. ಹಿಂದುಳಿದ ಸಮುದಾಯಗಳ ಮೀಸಲಾತಿಗಾಗಿ ಹಾವನೂರು ಆಯೋಗ ರಚಿಸಿದರು. ಉಳುವವನೇ ಭೂ ಒಡೆಯ ಕಾನೂನು ಜಾರಿ ಮಾಡಿದರು.

ಯಾರು ವಿಧಾನಸೌಧದ ಕನಸು ಕಾಣಲೂ ಸಾಧ್ಯ ಇರಲಿಲ್ಲವೋ ಅಂತಹ ಜಾತಿಗಳ ಪ್ರತಿನಿಧಿಗಳು ವಿಧಾನಸೌಧಕ್ಕೆ ಆರಿಸಿ ಬಂದು ಮಂತ್ರಿಗಳಾಗುವ ಹಾಗೆ ಕ್ರಾಂತಿ ಮಾಡಿದವರು ಅರಸು ಅವರು ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular