HomeKarnatakaಜು. 31ರಂದು ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ: ಬಿ.ವೈ. ವಿಜಯೇಂದ್ರ

ಜು. 31ರಂದು ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ: ಬಿ.ವೈ. ವಿಜಯೇಂದ್ರ

ಶಿವಮೊಗ್ಗ: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಜುಲೈ 31 ರಂದು ಮಂಡ್ಯದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತ ಸಂಘಟನೆಗಳು ಮತ್ತು ಇತರ ಸಂಘ-ಸಂಸ್ಥೆಗಳು ಹೋರಾಟದಲ್ಲಿ ಭಾಗವಹಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡಿದರು.

ಕಾವೇರಿ ನದಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆಕ್ಷೇಪಿಸಿದ ಅವರು, CWRC ವಾದ ಮಾಡುವ ನಮ್ಮ ವಕೀಲರು ಮತ್ತು ನ್ಯಾಯವಾದಿಗಳು ಇಲ್ಲಿನ ನೀರಿನ ಲಭ್ಯತೆ ವಿಚಾರದಲ್ಲಿ ಸಮಗ್ರ ಮಾಹಿತಿ ಕೊಡುವಲ್ಲಿ ವಿಫಲವಾಗಿದ್ದಾರೆ. ಕರ್ನಾಟಕದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಾವೇರಿ ಕೊಳ್ಳದ ರೈತರು ಮಳೆಯ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ತಾಂಡವಾಡುತ್ತಿದೆ. ಮಳೆಯ ಅಭಾವವಿದೆ. ನಾವೀಗ ಎಚ್ಚರಿಕೆಯಿಂದ ಇರಬೇಕು ಮಳೆಯನ್ನು ನಂಬಿ ಬಿತ್ತನೆ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ರಾಜ್ಯದ ಮನವಿ ಮಾಡಿದ್ದರು. ನಂತರ ಈಗ ಕದ್ದುಮುಚ್ಚಿ, ರಾತ್ರೋರಾತ್ರಿ ನಮ್ಮ ರೈತರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ನೀರು ಹರಿಸುವ ಕೆಲಸ ಮಾಡಿದ್ದು, ಇದು ರೈತರಿಗೆ ಮಾಡಿದ ದ್ರೋಹ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗ ಕೆಆರ್‌ಎಸ್ ಡ್ಯಾಂನಲ್ಲಿ 17.39 ಟಿಎಂಸಿ ನೀರಿದ್ದು, ಡೆಡ್ ಸ್ಟೋರೇಜ್ ಶೇ.5ರ ಷ್ಟಿದ್ದು ನಮಗೆ 14.39 ಟಿಎಂಸಿ ಮಾತ್ರ ನೀರು ಲಭ್ಯವಿದ್ದು, ಈಗ ನೀರು ಹರಿಬಿಟ್ಟರೆ ರೈತರ ಪರಿಸ್ಥಿತಿ ಏನಾಗಬಹುದು? ಯಾಕೆ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದೀರಿ. ಮರು ಪರಿಶೀಲನೆ ಅರ್ಜಿ ತಕ್ಷಣ ಹಾಕಿ CWRC ಗೆ ಮನವರಿಕೆ ಮಾಡಿಕೊಡಿ ಎಂದರು.

ಕಾವೇರಿ ಜಲಾನಯನ ಪ್ರದೇಶದ ರೈತರು ಕುಡಿಯುವ ನೀರಿಗೂ ತೊಂದರೆ ಎದುರಿಸಬೇಕಾಗಿದೆ. ವಾಸ್ತವಾಂಶವನ್ನು ರಾಜ್ಯ ಸರ್ಕಾರವು CWRC ಗೆ ತಿಳಿಸಬೇಕಿತ್ತಲ್ಲವೇ? ಇದರ ಬದಲಾಗಿ ಮುಖ್ಯಮಂತ್ರಿಗಳು ಕಾವೇರಿ ಕೊಳ್ಳದ ರೈತರು ಯಾರೂ ಬಿತ್ತನೆ ಮಾಡಬಾರದೆಂದು ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರಿಗೆ ಮೋಸ ಮಾಡಿದೆ. ಯುಪಿಎ ಪಾಲುದಾರ ತಮಿಳುನಾಡು ಮುಖ್ಯಮಂತ್ರಿಯನ್ನು ಖುಷಿಯಿಂದಿಡಲು ಅದು ಕ್ರಮ ಕೈಗೊಂಡಿದೆ ಎಂದು ಆಕ್ಷೇಪಿಸಿದರು.

ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕರೊಬ್ಬರು ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ರಾಜ್ಯ ಸರ್ಕಾರ ಅವರ ವಿರುದ್ಧವೇ ಎಫ್‌ಐಆರ್ ದಾಖಲು ಮಾಡಿದೆ. ಯಾರನ್ನು ಖುಷಿಪಡಿಸಲಿಕ್ಕಾಗಿ ಈ ರೀತಿ ಮಾಡುತ್ತಿದ್ದೀರಿ? ಅಕ್ರಮ ನುಸುಳುಕೋರರಿಗೆ ನಿವಾಸಿ ದೃಢೀಕರಣ ಸರ್ಟಿಫಿಕೇಟ್ ಕೊಡಲು ಸರ್ಕಾರ ಹೊರಟಿದೆ. ಇದು ದೇಶದ್ರೋಹದ ಕೆಲಸ. ನಿವು ಮಾಡುವ ತಪ್ಪಿಗೆ ಹೈಕೋರ್ಟ್ ಮಧ್ಯಪ್ರವೇಶ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಮ್ಮ ರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಕರ್ನಾಟಕಕ್ಕೆ ಸಾಕಷ್ಟು ನೀರಿದ್ದರೆ ಬಳಿಕ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ನಿರ್ಧಾರ ಮಾಡಬಹುದು ಎಂದರು.

ಸಿದ್ಧರಾಮಯ್ಯ ಚುನಾವಣಾ ನಿವೃತ್ತಿ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟುಮಾಡಲಿದೆ. ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಸಿದ್ದರಾಮಯ್ಯನವರ ಈ ನಿರ್ಧಾರದಿಂದ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು 50-60ಕ್ಕೆ ಇಳಿಯಲಿದೆ ಎಂದರು.

ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇವೆ. ಮೀಸಲಾತಿ ನೆಪವೊಡ್ಡಿ ಹುದ್ದೆ ಭರ್ತಿ ಮಾಡದೆ ಯುವಕರ ಜೀವನ ಹಾಳು ಮಾಡುತ್ತಿದ್ದಾರೆ. ಪಿಡಿಒ, ಪಶುವೈದ್ಯ ನೇಮಕಾತಿ 400 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಗರಣವಾಗಿದೆ. ಪಶುವೈದ್ಯ ವಿದ್ಯಾರ್ಥಿಗಳು ಈ ಬಗ್ಗೆ ದಾಖಲೆ ಸಹಿತ ದೂರು ನೀಡಲು ಠಾಣೆಗೆ ಬೆಳಿಗ್ಗೆ ಹೋದರೆ ಮಧ್ಯರಾತ್ರಿ 3 ಗಂಟೆಗೆ ಎಫ್‌ಐಆರ್ ಮಾಡಲಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಮಾಲತೇಶ್, ಹರಿಕೃಷ್ಣ, ಚಂದ್ರಶೇಖರ್, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ಮೋಹನ್ ರೆಡ್ಡಿ, ಶ್ರೀನಾಗ್, ಶರತ್ ಕಲ್ಯಾಣಿ ಮತ್ತಿತರರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular