ಬೆಂಗಳೂರು: ಉದ್ಯಾನವನ ಮತ್ತು ಉದ್ಯಾನದ ಭೂಮಿಯನ್ನು ಬೇರೆಡೆಗೆ ತಿರುಗಿಸಲು ಅನುಮತಿಸುವ ಕರ್ನಾಟಕ ಸರ್ಕಾರಿ ಉದ್ಯಾನಗಳು(ಸಂರಕ್ಷಣೆ) ತಿದ್ದುಪಡಿ ವಿಧೇಯಕ ಒಪ್ಪಿಗೆಯನ್ನು ತಡೆ ಹಿಡಿಯುವಂತೆ ರಾಜ್ಯ ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರಿಗೆ ಮನವಿ ಸಲ್ಲಿಸಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರ ನಿಯೋಗವು ರಾಜ್ಯಪಾಲರನ್ನು ಭೇಟಿಯಾಗಿ ಈ ಕುರಿತಾಗಿ ಮನವಿ ಮಾಡಿದೆ.
ಈ ತಿದ್ದುಪಡಿ ವಿಧೇಯಕದಲ್ಲಿ ಉದ್ಯಾನಗಳು ಮತ್ತು ಉದ್ಯಾನಗಳ ಶೇ.5ರಷ್ಟು ಭೂಮಿಯನ್ನು ಸಾರ್ವಜನಿಕ ಮೂಲಸೌಕರ್ಯ ಮತ್ತು ಉಪಯುಕ್ತತೆ ಉದ್ದೇಶಗಳಿಗಾಗಿ(ಮಾರಾಟ, ಗುತ್ತಿಗೆ, ಉಡು ಗೊರೆ, ವಿನಿಮಯ ಅಥವಾ ಅಡಮಾನ) ಬೇರೆಡೆಗೆ ತಿರು ಗಿಸಲು ಅನುಮತಿಸಲಾಗಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ ಎಂದು ತಿಳಿಸಲಾಗಿದೆ.
ಈ ನಿಬಂಧನೆಯು ಸಾರ್ವಜನಿಕ ಉದ್ಯಾನಗಳ ಶಾಸನ ಬದ್ಧ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ. ಬೆಂಗಳೂರಿನ ಹಸಿರು ಪರಿಸರದ ಸ್ಥಳಗಳಿಗೆ ಅಪಾಯ ಉಂಟು ಮಾಡುತ್ತದೆ. ಉದ್ಯಾನಗಳು ತಾಜಾ ಗಾಳಿ, ಇಂಗಾಲದ ಹೀರಿಕೊಳ್ಳುವಿಕೆ, ಅಂತರ್ಜಲ ಮರುಪೂರಣ, ತಾಪಮಾನ ನಿಯಂತ್ರಣ, ಜೀವವೈವಿಧ್ಯ ಮತ್ತು ಮನರಂಜನೆಯನ್ನು ಒದಗಿಸುವ ಪ್ರಮುಖ ಪರಿಸರ ಸ್ವತ್ತುಗಳಾಗಿವೆ.
ತೀವ್ರ ವಾಯು ಮಾಲಿನ್ಯ, ಹೆಚ್ಚುತ್ತಿರುವ ತಾಪಮಾನದ ಸಂದರ್ಭದಲ್ಲಿ ಅಸ್ತಿತ್ವದಲ್ಲಿರುವ ಹಸಿರು ಸ್ಥಳಗಳನ್ನು ಕಡಿಮೆ ಮಾಡುವುದು ಪರಿಸರ ಸರಿಯಲ್ಲ. ಮೂಲ ಸೌಕರ್ಯ ಅಗತ್ಯಗಳನ್ನು ಪರ್ಯಾಯ ಆಯ್ಕೆಗಳು ಅಥವಾ ಇತರ ಸರ್ಕಾರಿ ಭೂಮಿಯ ಮೂಲಕ ಪೂರೈಸಬಹುದಾಗಿದೆ. ಈ ತಿದ್ದುಪಡಿ ವಿಧೇಯಕವು ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಹೆಚ್ಚಿಸುವ ರಾಷ್ಟ್ರೀಯ ಗುರಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ.
ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಂತಹ ಸಾಂಪ್ರದಾಯಿಕ ಸ್ಥಳಗಳು ಬೆಂಗಳೂರಿನ ಪರಿಸರ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಗುರುತಿನ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಯಾವುದೇ ತಿದ್ದುಪಡಿಯು ಸಮಗ್ರ ಮೌಲ್ಯಮಾಪನ ಇಲ್ಲದೆ ಮುಂದುವರೆಯಬಾರದು. ಪರಿಸರ ಮತ್ತು ಸಾರ್ವಜನಿಕ ಹಿತಾಸಕ್ತಿ ಗಮನಿಸಿ ಈ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡುವುದನ್ನು ತಡೆ ಹಿಡಿಯುವಂತೆ ನಿಯೋಗವು ಮನವಿ ಮಾಡಿದೆ.
ನಾಗೇಂದ್ರ ಸಂಪುಟ ಸೇರ್ಪಡೆ ಹಿಂಪಡೆಯಲು ಮನವಿ
ಬಿ. ನಾಗೇಂದ್ರ ಸಂಪುಟ ಸೇರ್ಪಡೆಯನ್ನು ಹಿಂಪಡೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹು ಕೋಟಿ ಸಾರ್ವಜನಿಕ ಹಣದ ಅಕ್ರಮದ ತನಿಖೆಯಲ್ಲಿ ಸಿಬಿಐ ಹಾಗೂ ಲೋಕಾಯುಕ್ತ ಸಂಸ್ಥೆಗಳು ಚಾರ್ಜ್‌ಶೀಟ್ ಸಲ್ಲಿಸಿವೆ. ಈ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರ ಹೆಸರನ್ನು ಪ್ರಮುಖ ಆರೋಪಿಯಾಗಿ ಉಲ್ಲೇಖಿಸಲಾಗಿದೆ.
ಇಂತಹ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಆರಂಭದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು, ತನಿಖೆ ಇನ್ನೂ ಮುಂದುವರಿದಿರುವಾಗಲೇ ಹಾಗೂ ಯಾವುದೇ ಖುಲಾಸೆ ದೊರೆಯದಿರುವಾಗ ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದು ಸಂವಿಧಾನಾತ್ಮಕ ನೈತಿಕತೆ ಮತ್ತು ಸಾರ್ವಜನಿಕ ವಿಶ್ವಾಸಾರ್ಹತೆಗೆ ಎಸೆದಿರುವ ಗಂಭೀರ ಸವಾಲು.
ಈ ಹಿನ್ನೆಲೆಯಲ್ಲಿ, ಮಾನ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಿ ಅವರಿಗೆ ಪತ್ರ ಬರೆದು, ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದೇನೆ.
ಉನ್ನತ ಸಂವಿಧಾನಿಕ ಹುದ್ದೆಗಳಲ್ಲಿ ಸಾರ್ವಜನಿಕ ವಿಶ್ವಾಸಾರ್ಹತೆ, ಪ್ರಾಮಾಣಿಕತೆ ಮತ್ತು ನೈತಿಕತೆ ಅತ್ಯಂತ ಮಹತ್ವದ್ದಾಗಿದೆ ಎಂಬುದನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯವು ‘ಮನೋಜ್ ನರುಲಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿದೆ.
ಹೀಗಿರುವಾಗ, ರಾಜಕೀಯ ಅನುಕೂಲಕ್ಕಾಗಿ ಸಂವಿಧಾನಾತ್ಮಕ ಮೌಲ್ಯಗಳನ್ನು ಬಲಿಕೊಡಲು ಅವಕಾಶ ನೀಡಬಾರದು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿ. ನಾಗೇಂದ್ರ ಅವರ ಸಂಪುಟ ಸೇರ್ಪಡೆಯನ್ನು ತಕ್ಷಣವೇ ಹಿಂಪಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.
ಕರ್ನಾಟಕದ ಜನತೆಗೆ ಪಾರದರ್ಶಕ, ಪ್ರಾಮಾಣಿಕ ಮತ್ತು ಜವಾಬ್ದಾರಿಯುತ ಆಡಳಿತ ಪಡೆಯುವ ಸಂಪೂರ್ಣ ಹಕ್ಕಿದೆ. ಸಾರ್ವಜನಿಕ ವಿಶ್ವಾಸಾರ್ಹತೆಗಿಂತ ಯಾವುದೇ ರಾಜಕೀಯ ಲೆಕ್ಕಾಚಾರ ದೊಡ್ಡದಲ್ಲ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಈ ಸಂದರ್ಭಧಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಇತರರು ಇದ್ದರು.

