ಪಾಟ್ನಾ: ಲೈವ್ ಸಂಗೀತ ಕಾರ್ಯಕ್ರಮದ ನಂತರ ಮಹಿಳಾ ಡ್ಯಾನ್ಸರ್ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಆಕೆಯ ಪತಿಯ ಮುಂದೆಯೇ ಅತ್ಯಾಚಾರ ಎಸಗಿದ್ದಾರೆ.
ಬಿಹಾರದ ಪಾಟ್ನಾದ ಹೊರವಲಯದಲ್ಲಿರುವ ಶಾಹಪುರ್ ಪ್ರದೇಶದಲ್ಲಿ ಮಹಿಳಾ ಡ್ಯಾನ್ಸರ್ ಮೇಲೆ ಆಕೆಯ ಪತಿಯ ಸಮ್ಮುಖದಲ್ಲೇ ಅತ್ಯಾಚಾರ ನಡೆದಿದೆ. ಸಂತ್ರಸ್ತೆ ನರ್ತಕಿಯಾಗಿದ್ದು, ಬುಧವಾರ ಮುಂಜಾನೆ ಪ್ರದರ್ಶನ ಸ್ಥಳದಿಂದ ತನ್ನ ಪತಿಯೊಂದಿಗೆ ಮನೆಗೆ ಮರಳುತ್ತಿದ್ದಳು. ಶಾಹಪುರ್ ಡೇರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣಕ್ಕೆ ಅವರನ್ನು ಬಿಡುವ ನೆಪದಲ್ಲಿ ಮೂವರು ಪುರುಷರು ತಮ್ಮ ಮೋಟಾರ್ ಸೈಕಲ್ ಗಳಲ್ಲಿ ಕರೆದುಕೊಂಡು ಹೋಗಿದ್ದಾರೆ. ಆಕೆಯ ಪತಿ ದಿಗ್ವಾರಾ ರೈಲ್ವೆ ನಿಲ್ದಾಣಕ್ಕೆ ಹೋಗುವ ಬಗ್ಗೆ ದಾರಿ ಕೇಳಿದಾಗ, ಅವರು ದಂಪತಿಗಳನ್ನು ತಮ್ಮ ಮೋಟಾರ್ ಸೈಕಲ್‌ಗಳಲ್ಲಿ ಹತ್ತಲು ಕೇಳಿಕೊಂಡರು. ಅವರನ್ನು ನಿಲ್ದಾಣಕ್ಕೆ ಕರೆದೊಯ್ಯುವ ಬದಲು ನಿರ್ಜನ ಸ್ಥಳಕ್ಕೆ ಕರೆದೊಯ್ದು ಆಕೆಯ ಪತಿಯ ಮುಂದೆಯೇ ಅತ್ಯಾಚಾರ ಎಸಗಿದ್ದಾರೆ ಎಂದು ಎಎಸ್ಪಿ(ದಾನಾಪುರ) ಭಾನು ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಕೃತ್ಯವೆಸಗಿದ ನಂತರ ಆರೋಪಿಗಳು ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸಂತ್ರಸ್ತರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮನೋಜ್ ಕುಮಾರ್ ಮತ್ತು ಮನೀಶ್ ಕುಮಾರ್ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ. ಮೂರನೇ ಆರೋಪಿ ನಾಗೇಂದ್ರ ಕುಮಾರ್ ಅವರನ್ನು ಬಂಧಿಸಲು ಶೋಧ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.