HomeIndiaಒಂದು ಚೀಲ ಅಕ್ಕಿ, ತೇಲ್‌ ಪಾನಿ ; ಲಂಚ ಪಡೆಯಲು ಬಿಹಾರ ಪೊಲೀಸರ ಹೊಸ ಕೋಡ್‌...

ಒಂದು ಚೀಲ ಅಕ್ಕಿ, ತೇಲ್‌ ಪಾನಿ ; ಲಂಚ ಪಡೆಯಲು ಬಿಹಾರ ಪೊಲೀಸರ ಹೊಸ ಕೋಡ್‌ ವರ್ಡ್ ರಹಸ್ಯ ಬಯಲು !

ಬಿಹಾರದಲ್ಲಿ ಭ್ರಷ್ಟ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ವಿಜಿಲೆನ್ಸ್ ಗುಪ್ತಚರ ದಳವು ತೀವ್ರ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ, ಲಂಚಕೋರ ಸರ್ಕಾರಿ ನೌಕರರು ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳಲು ಹೊಚ್ಚಹೊಸ ರಹಸ್ಯ ಸಂಕೇತ ಭಾಷೆಗಳನ್ನು ಬಳಸುತ್ತಿರುವ ವಿಚಿತ್ರ ಅಂಶ ಬೆಳಕಿಗೆ ಬಂದಿದೆ.

ಜಾಗೃತ ದಳದ ಬಲೆಗೆ ಬೀಳಬಾರದೆಂಬ ಉದ್ದೇಶದಿಂದ ಈ ಅಧಿಕಾರಿಗಳು ದೂರವಾಣಿ ಕರೆಯಲ್ಲಿ ನೇರವಾಗಿ ಹಣದ ಹೆಸರನ್ನಾಗಲಿ ಅಥವಾ ನಗದು ಮೊತ್ತವನ್ನಾಗಲಿ ಪ್ರಸ್ತಾಪಿಸುವುದಿಲ್ಲ. ಬದಲಿಗೆ ಒಂದು ಚೀಲ ಅಕ್ಕಿ, ಒಂದು ಪೆಟ್ಟಿಗೆ, ತೇಲ್ ಪಾನಿ ಎಂಬಂತಹ ಕೋಡ್ ವರ್ಡ್‌ಗಳನ್ನು ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಆದರೆ ಇಂತಹ ಸಂಕೇತ ಪದಗಳನ್ನು ಬಳಸಿದರೂ ಜಾಗೃತ ದಳದ ಅಧಿಕಾರಿಗಳು ಇವರ ತಂತ್ರಗಳನ್ನು ಭೇದಿಸಿ ಸರಣಿ ದಾಳಿ ನಡೆಸಿ ಬಂಧಿಸುತ್ತಿದ್ದಾರೆ.

ಪಾಟ್ನಾದ ಸ್ಥಳೀಯ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದರ ಆರೋಪಿಯ ಹೆಸರನ್ನು ಕೈಬಿಡಲು ತನಿಖಾಧಿಕಾರಿ ಅಜಿತ್ ಕುಮಾರ್ ಸಿಂಗ್ ಎಂಬಾತ ಒಂದು ಚೀಲ ಅಕ್ಕಿ ನೀಡುವಂತೆ ಬೇಡಿಕೆ ಇಟ್ಟಿದ್ದನು. ಇಲ್ಲಿ ಒಂದು ಚೀಲ ಅಕ್ಕಿ ಎಂದರೆ ₹1 ಲಕ್ಷ ರೂಪಾಯಿ ಎಂದರ್ಥ. ಆರೋಪಿಯ ತಾಯಿ ತನಿಖಾಧಿಕಾರಿಯೊಂದಿಗೆ ಮಾತನಾಡಿದ ಆಡಿಯೋ ಕರೆಯನ್ನು ಧ್ವನಿಮುದ್ರಿಸಿಕೊಂಡು ಜಾಗೃತ ದಳಕ್ಕೆ ಹಸ್ತಾಂತರಿಸಿದ್ದರು. ಪರಿಶೀಲನೆ ನಡೆಸಿದ ಅಧಿಕಾರಿಗಳು ಬಲೆ ಬೀಸಿ ಆ ಪೋಲಿಸ್ ಅಧಿಕಾರಿಯನ್ನು ರೆಡ್‌ಹ್ಯಾಂಡಾಗಿ ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತ್ತೊಂದು ಪ್ರಕರಣದಲ್ಲಿ ಕಂದಾಯ ಮತ್ತು ಭೂಸುಧಾರಣಾ ಇಲಾಖೆಯ ಅಧಿಕಾರಿ ಕಾಂಚನ್ ಕುಮಾರಿ ಝಾ ಎಂಬಾಕೆ ಜಮೀನಿನ ಕಡತ ವಿಲೇವಾರಿ ಮಾಡಲು ಮಧ್ಯವರ್ತಿಯಾಗಿದ್ದ ತನ್ನ ಕೆಲಸದಾಕೆಯ ಮೂಲಕ ಒಂದು ವಾಷಿಂಗ್ ಮೆಷಿನ್ ಹಾಗೂ ₹2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದಾರೆ.

ಅದೇ ರೀತಿ ಮಹಾನಗರ ಪಾಲಿಕೆಯ ನಿವೃತ್ತ ನೌಕರರೊಬ್ಬರಿಗೆ ಪಿಂಚಣಿ ಮತ್ತು ಭವಿಷ್ಯ ನಿಧಿಯ ಬಾಕಿ ಹಣ ಬಿಡುಗಡೆ ಮಾಡಲು ಭ್ರಷ್ಟ ಅಧಿಕಾರಿಯೊಬ್ಬ ಒಂದು ಪೆಟ್ಟಿಗೆ ನೀಡುವಂತೆ ಕೇಳಿದ್ದನು. ಆಡುಭಾಷೆಯಲ್ಲಿ ಒಂದು ಪೆಟ್ಟಿಗೆ ಎಂದರೆ ₹1 ಲಕ್ಷ ರೂಪಾಯಿ ಎಂಬುದನ್ನು ಅರಿತ ಆ ನಿವೃತ್ತ ನೌಕರರು ಸಂಭಾಷಣೆಯನ್ನು ರೆಕಾರ್ಡ್ ಮಾಡಿ ನೀಡಿದ್ದು, ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದೆ.

ವೈಶಾಲಿ ಜಿಲ್ಲೆಯಲ್ಲಿ ಅಪಹರಣಕ್ಕೊಳಗಾದ ಬಾಲಕಿಯನ್ನು ರಕ್ಷಿಸಲು ಕುಟುಂಬಸ್ಥರು ಪರಿತಪಿಸುತ್ತಿದ್ದಾಗ, ತನಿಖಾಧಿಕಾರಿ ಮೇಘನಾಥ್ ರಾಮ್ ಎಂಬಾತ ತೇಲ್ ಪಾನಿ ಖರ್ಚು ನೀಡುವಂತೆ ಪೀಡಿಸಿದ್ದನು. ತೇಲ್ ಪಾನಿ ಎಂದರೆ ₹10,000 ರೂಪಾಯಿ ಲಂಚವಾಗಿದ್ದು, ಹಣ ನೀಡುವ ವೇಳೆಯಲ್ಲೇ ಜಾಗೃತ ದಳ ದಾಳಿ ನಡೆಸಿ ಆತನನ್ನು ಹೆಡೆಮುರಿ ಕಟ್ಟಿದೆ.

ಹೊಸ ಕಾನೂನಿನ ಅನ್ವಯ ಧ್ವನಿ ಪರೀಕ್ಷೆಯ ಸಮಯದಲ್ಲಿ ಮಾದರಿ ಧ್ವನಿ ಹೊಂದಾಣಿಕೆಯಾದರೆ ಆಡಿಯೋ ಧ್ವನಿಮುದ್ರಣವು ನ್ಯಾಯಾಲಯದಲ್ಲಿ ಮಾನ್ಯವಾದ ಸಾಕ್ಷ್ಯವಾಗಲಿದ್ದು, ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಇದು ಸಹಕಾರಿಯಾಗಲಿದೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular