ಪ್ರಸಿದ್ಧ ರ‍್ಯಾಪರ್ ಮತ್ತು ಗಾಯಕ ಬಾದ್‌ಶಾ ಅವರೊಂದಿಗೆ ಇತ್ತೀಚಿಗಷ್ಟೇ ವಿಚ್ಛೇದನ ಪಡೆದುಕೊಂಡಿದ್ದ ಪಂಜಾಬಿ ನಟಿ ಈಶಾ ರಿಖಿ, ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 20 ಶೋಗೆ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಕಾರ್ಯಕ್ರಮದ ಆರಂಭಿಕ ಸಂಚಿಕೆಯಲ್ಲೇ ತಮ್ಮ ಹಳೆಯ ಜೀವನದ ಘಟನೆಗಳನ್ನು ನೆನೆದು ಈಶಾ ರಿಖಿ ಭಾವುಕರಾಗಿದ್ದಾರೆ.
ಕೆಲವೇ ದಿನಗಳ ಹಿಂದಷ್ಟೇ, ಅಂದರೆ ಆಗಸ್ಟ್ 31 ರಂದು ಬಾದ್‌ಶಾ ಮತ್ತು ಈಶಾ ರಿಖಿ ಪರಸ್ಪರ ಒಪ್ಪಂದದ ಮೂಲಕ ತಮ್ಮ ಐದು ತಿಂಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ಘೋಷಿಸಿದ್ದರು. ಇದೀಗ ತಮ್ಮ ನೋವಿನಿಂದ ಹೊರಬಂದು ಹೊಸ ಜೀವನ ಆರಂಭಿಸುವ ಉದ್ದೇಶದಿಂದ ಈಶಾ ಬಿಗ್ ಬಾಸ್ ವೇದಿಕೆಗೆ ಹೆಜ್ಜೆ ಇಟ್ಟಿದ್ದಾರೆ.
ನನ್ನ ಕಥೆಯಲ್ಲಿ ನಾನೇ ಸೈಡ್ ಕ್ಯಾರಕ್ಟರ್ ಆದೆ
ಕಾರ್ಯಕ್ರಮದ ಪರಿಚಯಾತ್ಮಕ ವಿಡಿಯೋದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡ ಈಶಾ, ಮದುವೆಯಾಗಿ ನೆಮ್ಮದಿಯಿಂದ ಜೀವನ ನಡೆಸಬೇಕು ಎಂಬ ಆಸೆ ನನಗಿತ್ತು. ಆದರೆ ಕೆಲವು ಅನುಭವಗಳು ಮನುಷ್ಯನನ್ನು ಸಂಪೂರ್ಣವಾಗಿ ಬದಲಾಯಿಸಿಬಿಡುತ್ತವೆ. ನಂಬಿಕೆ ಮುರಿದುಬಿದ್ದಾಗ ಎಲ್ಲಿ ತಪ್ಪಾಯಿತು ಎಂದು ಯೋಚಿಸುವಂತಾಗುತ್ತದೆ. ನನ್ನ ಸ್ವಂತ ಕಥೆಯಲ್ಲೇ ನಾನು ಯಾವಾಗ ಸೈಡ್ ಕ್ಯಾರಕ್ಟರ್ ಆದೆ ಎಂಬುದು ನನಗೇ ತಿಳಿಯಲಿಲ್ಲ ಎಂದು ಕಣ್ಣೀರಿಟ್ಟರು. ಆದಾಗ್ಯೂ, ತಮ್ಮ ನಿರ್ಧಾರದ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಳೆಯ ನೆನಪುಗಳಿಂದ ಹೊರಬಂದು ತಮ್ಮದೇ ಆದ ಪ್ರತ್ಯೇಕ ಗುರುತು ಕಂಡುಕೊಳ್ಳಲು ಮತ್ತು ನಿಜವಾದ ಈಶಾ ಯಾರೆಂದು ಜನರಿಗೆ ತೋರಿಸಲು ಬಿಗ್ ಬಾಸ್‌ಗೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.
ಮೂವ್ ಆನ್ ಆಗಲು ಸಲ್ಮಾನ್ ಖಾನ್ ಸಲಹೆ
ವೇದಿಕೆ ಮೇಲೆ ಈಶಾ ಭಾವುಕರಾಗಿದ್ದನ್ನು ಕಂಡ ನಿರೂಪಕ ಸಲ್ಮಾನ್ ಖಾನ್ ಅವರಿಗೆ ಧೈರ್ಯ ತುಂಬಿದರು. ಪ್ರತಿಯೊಬ್ಬರ ಜೀವನದಲ್ಲೂ ಬ್ರೇಕಪ್ ಸಾಮಾನ್ಯ, ಹಳೆಯ ವಿಷಯಗಳಿಗಾಗಿ ಅಳುವ ಅಗತ್ಯವಿಲ್ಲ ಎಂದು ಹೇಳಿದರು.
ಖಾಸಗಿ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸದೆ ಗೌಪ್ಯವಾಗಿಡುವುದೇ ಒಳ್ಳೆಯದು ಎಂದ ಸಲ್ಮಾನ್, ಹಳೆಯ ಘಟನೆಗಳನ್ನು ಮರೆತು ಮುನ್ನಡೆಯುವಂತೆ ಸಲಹೆ ನೀಡಿದರು. ಎದುರಿನ ವ್ಯಕ್ತಿ ಈಗಾಗಲೇ ಮುನ್ನಡೆದಿದ್ದಾರೆ, ಆದ್ದರಿಂದ ನೀವು ಕೂಡ ಧೈರ್ಯವಾಗಿ ಮುನ್ನಡೆಯಿರಿ ಎಂದು ಈಶಾಗೆ ಸಲ್ಮಾನ್ ಕಿವಿಮಾತು ಹೇಳಿದರು.
ಈಶಾ ರಿಖಿ ಜೊತೆಗೆ ಭೋಜ್‌ಪುರಿ ನಟಿ ಆಮ್ರಪಾಲಿ ದುಬೆ ಕೂಡ ಬಿಗ್ ಬಾಸ್ 20 ಮನೆಗೆ ಪ್ರವೇಶಿಸಿದ್ದಾರೆ. ಈಶಾ ಈ ಹಿಂದೆ ಜೂನ್ ತಿಂಗಳಿನಲ್ಲಿ ಬಾದ್‌ಶಾ ಜೊತೆಗಿನ ತಮ್ಮ ಮದುವೆಯ ಸುದ್ದಿಯನ್ನು ಖಾತರಿಪಡಿಸಿದ್ದರು.

