ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಜನ್ ನ 13 ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಆದರೆ ಈವರೆಗೂ ಕಾರ್ಯಕ್ರಮ ಆಯೋಜಕರು ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದಿದೆ.
ಕಳೆದ ವರ್ಷ ಇದೇ ವಿಚಾರವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆ ಬಿಗ್ ಬಾಸ್ ಆಯೋಜಕರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ಈ ವರ್ಷ ಕೂಡ ಪರಿಸರ ಇಲಾಖೆಯಿಂದ ಅನುಮತಿ ಕೋರಿ ಈವರೆಗೂ ಮನವಿ ಸಲ್ಲಿಸಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಅರಣ್ಯ ಮತ್ತು ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ(ಎಸ್ಟಿಪಿ) ನಿರ್ಮಾಣದ ಸಂಬಂಧ ಕಳೆದ ವರ್ಷ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಪರಿಸರ ಇಲಾಖೆಯಿಂದ ಅನುಮತಿ ಕೋರಿ ಈವರೆಗೂ ಮನವಿ ಸಲ್ಲಿಸಿಲ್ಲ ಎಂದು ತಿಳಿಸಿದರು.
ಬಿಗ್ ಬಾಸ್ ಆಯೋಜಕರು ಅನುಮತಿ ಕೋರಿ ಮನವಿ ಸಲ್ಲಿಸಿದಲ್ಲಿ, ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಉಲ್ಲಂಘನೆ ಆಗಿದ್ದಲ್ಲಿ ನಿಗದಿತ ದಂಡ ವಿಧಿಸಿ ಕಾನೂನು ಪ್ರಕಾರದಲ್ಲಿ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಇನ್ನು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕಸ್ತೂರಿ ರಂಗನ್ ಅವರ ವರದಿಯ ಜಾರಿಗೆ ಸಂಬಂಧಿಸಿದಂತೆ ಈವರೆಗೂ ಹೊರಡಿಸಿದ್ದ 6 ಅಧಿಸೂಚನೆಗಳನ್ನು ತಿರಸ್ಕರಿಸಲಾಗಿದೆ. ಅದೇ ರೀತಿಯಲ್ಲಿ 7ನೇ ಅಧಿಸೂಚನೆಯನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿದರು.
ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಜನನಿಬಿಡ ಮತ್ತು ಕೃಷಿ ಪ್ರದೇಶಗಳನ್ನು ಪರಿಸರಸೂಕ್ಷ್ಮ ಪ್ರದೇಶ ಎಂಬುದಾಗಿ ಸೇರ್ಪಡೆ ಮಾಡುವುದಕ್ಕೆ ಕೇರಳಂ ಸರ್ಕಾರ ನಿರಾಕರಿಸಿದೆ. ಇದೇ ರೀತಿಯ ತೀರ್ಮಾನವನ್ನು ರಾಜ್ಯದಲ್ಲಿಯೂ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಸರ್ವಪಕ್ಷಗಳ ಅಭಿಪ್ರಾಯ ಪಡೆಯಲಾಗುವುದು. ಜತೆಗೆ, ವಿಶೇಷ ಅಧಿವೇಶನ ನಡೆಸಿ ಈ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಸೂಕ್ತ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

